ಗ್ರಾಮೀಣ ಶಾಲಾ ಮಕ್ಕಳು ಪ್ರತಿಭಾವಂತರು – ಶಾಸಕ ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ : ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳು ಪ್ರತಿಭಾವಂತರು. ಅದು ಅನಾವರಣಗೊಳ್ಳಲು ಸೂಕ್ತ ಪರಿಸರ ಒದಗಿಸುವುದು ಶಿಕ್ಷಕರ ಕರ್ತವ್ಯ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಸಮೀಪದ ಕಾರೆಮಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಶಾಲೆ ಕಾರೆಮಟ್ಟಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಈ ಅದ್ದೂರಿ ಕಾರ್ಯಕ್ರಮ ಎಲ್ಲಾ ಶಾಲೆಗಳಿಗೂ ಮಾದರಿಯಾಗಬೇಕು ಎಂದರು.
ಕುವೆಂಪು, ಮಾಸ್ತಿ, ಕಾರಂತರು ಹಳ್ಳಿಯಲ್ಲಿ ಹುಟ್ಟಿ ಮಹಾನ್ ಸಾಧನೆ ಮಾಡಿದ್ದಾರೆ, ತಾಯಿ ಮಗುವಿಗೆ ಹಾಲುಣಿಸುವಾಗಲೇ ಸಂಸ್ಕಾರಗಳನ್ನು ಕಲಿಸಬೇಕು. ಭಾರತ ಸಂಸ್ಕೃತಿ, ಸಂಸ್ಕಾರಗಳ ಪ್ರತೀಕವಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಿಂದಲೇ ನೈತಿಕ ಮೌಲ್ಯಗಳು ನಶಿಸುತ್ತಿವೆ ಎಂದು ಕಳವಳ ವ್ಯಕ್ತ ಪಡಿಸಿದರು.
ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ವಿದ್ಯಾವಂತನಾಗಿ ಉತ್ತಮ ನೌಕರಿ ಪಡೆದು ಕೆಲವರು ಬ್ರೀಟೀಷರಂತೆ ವರ್ತಿಸುತ್ತಾರೆ,ಉತ್ತಮ
ಶಿಕ್ಷಣ ಐಪಿಎಸ್ ,ಐಎಎಸ್ ,ವಕೀಲ , ಪೊಲೀಸ್ ರಂತಹ ಅಧಿಕಾರಿಗಳನ್ನು ರೂಪಿಸುತ್ತೆ ಆದರೆ ಯೋಗ್ಯವಾದ ಮನುಷ್ಯನನ್ನು ರೂಪಿಸದೇ ಇರುವುದೇ ದುರದೃಷ್ಟಕರವಾಗಿದೆ,ಬಡವರ ರಕ್ತ ಹೀರುವ ಅಂತಕರಣವಿಲ್ಲದ ವಿದ್ಯಾವಂತರು ಬ್ರೀಟೀಷರಿಗೆ ಸಮ ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯ ಪಟ್ಟರು.
ಇದೇ ಸಂಧರ್ಭದಲ್ಲಿ ಶಾಲೆಯ ರಜತ ಮಹೋತ್ಸವ ಅಂಗವಾಗಿ ಶಾಲೆಗೆ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಲಾಯಿತು.ಗ್ರಾಮದ ಶತಾಯುಷಿ ಬಂಗಾರಮ್ಮ ರವರನ್ನು ಪ್ರೀತಿ ಪೂರ್ವಕವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅರವಿಂದ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ,ಚಿಕಜೇನಿ ಗ್ರಾಪಂ ಅಧ್ಯಕ್ಷ ಎನ್ ಪಿ ರಾಜು , ಉಪಾಧ್ಯಕ್ಷೆ ಸುಜಾತ ಸದಸ್ಯರಾದ ಭದ್ರಪ್ಪಗೌಡ , ನಳಿನಿ ನೌಕರರ ಸಂಘದ ನಿರ್ದೇಶಕ ಜಗದೀಶ್ ಕಾಗಿನೆಲೆ , ಶಿಕ್ಷಕರಾದ ಉಮೇಶ್ ಹಾಗೂ ಇನ್ನಿತರರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಸ್ವಾಗತಿಸಿದರು,ಶಿಕ್ಷಕ ಪ್ರಶಾಂತ್ ವಾರ್ಷಿಕ ವರದಿ ವಾಚಿಸಿದರು ,ಶಿಕ್ಷಕಿ ಆಶಾರಾಣಿ ನಿರೂಪಿಸಿದರು.