ರಿಪ್ಪನ್ ಪೇಟೆಯಲ್ಲಿ ಕ್ರೈಸ್ತ ಬಾಂಧವರಿಂದ ಕ್ರಿಸ್ಮಸ್ ಸಡಗರ ಸಂಭ್ರಮದಿಂದ ಆಚರಣೆ.
ಶಾಂತಿ ಮತ್ತು ನೆಮ್ಮದಿಯ ಮೂಲಕ ಪ್ರತಿಯೊಬ್ಬರು ಬದುಕು ಕಟ್ಟಿಕೊಳ್ಳೋಣ :ರೆ. ಫಾ. ಬಿನೋಯ್.
ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಒತ್ತಡದ ಜೀವನವನ್ನು ಸಾಗಿಸುತ್ತಿರುವ ಪ್ರತಿಯೊಬ್ಬರಿಗೂ ಶಾಂತಿ ಮತ್ತು ನೆಮ್ಮದಿಯ ಬದುಕು ಅತ್ಯವಶ್ಯಕವಾಗಿದೆ. ಮಾನವ ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿಯ ಮೂಲಕ ಬದುಕು ಕಟ್ಟಿಕೊಳ್ಳೋಣ ಎಂದು ರಿಪ್ಪನ್ ಪೇಟೆ ಗುಡ್ ಶಫರ್ಡ್ ಚರ್ಚಿನ ಧರ್ಮಗುರು ರೆ. ಫಾ. ಬಿನೋಯ್ ಹೇಳಿದರು.
ಪಟ್ಟಣದ ಗುಡ್ ಶಫರ್ಡ್ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು ಕ್ರಿಸ್ಮಸ್ ಹಬ್ಬವು ಕ್ರೈಸ್ತ ಬಾಂಧವರ ಪವಿತ್ರ ಹಬ್ಬವಾಗಿದೆ , ಈ ಹಬ್ಬವು ಜಗತ್ತು ಕಂಡ ದಾರ್ಶನಿಕ ಪ್ರವಾದಿ ಶಾಂತಿ ನೆಮ್ಮದಿಯಿಂದ ಸೇವೆಯ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂದು ಸಾರಿದ ಯೇಸು ಕ್ರಿಸ್ತನ ಹುಟ್ಟುಹಬ್ಬ ವಾಗಿದೆ. ಪ್ರತಿಯೊಬ್ಬ ಕ್ರೈಸ್ತ ಬಾಂಧವರು ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರೂ ಬೆರೆತು ಉತ್ತಮ ಪ್ರಜೆಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಪ್ರೀತಿ ವಿಶ್ವಾಸ ಹಾಗೂ ನಂಬಿಕೆಯ ಮೂಲಕ ಗೌರವವನ್ನು ನೀಡುವುದು ಪ್ರತಿಯೊಬ್ಬ ಕ್ರೈಸ್ತರ ಕರ್ತವ್ಯವಾಗಿರಬೇಕು.
ಮಾನವ ಸಂಕುಲ, ಪ್ರಾಣಿ ಸಂಕುಲ, ಹಾಗೂ ಪರಿಸರದ ರಕ್ಷಣೆಗೆ ಎಲ್ಲರೂ ಸಹಕಾರ ನೀಡುವುದರ ಮೂಲಕ ಸಮಾಜದ ರಕ್ಷಣೆಗೆ ಮುಂದಾದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಹಾಗೆಯೇ ಶಾಂತಿ ಸಂದೇಶ ಮತ್ತು ಸೇವೆಯ ಮೂಲಕ ಏಸುಕ್ರಿಸ್ತರ ಶುಭ ಸಂದೇಶಗಳನ್ನು ಪ್ರತಿಯೊಬ್ಬ ಕ್ರೈಸ್ತ ಬಾಂಧವರು ಅನುಸರಿಸುವುದರ ಮೂಲಕ ಜಗತ್ತಿಗೆ ಮಾದರಿಯಾಗಬೇಕು ಎಂದರು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದ ಹಾಗು ಜಿಲ್ಲೆಯ ವಿವಿಧಡೆಗಳಿಂದ ಆಗಮಿಸಿದ ಕ್ರೈಸ್ತ ಬಾಂಧವರ ಜೊತೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಬಂಧುಗಳು ಸಹ ಭಾಗಿಯಾಗಿ ಕ್ರಿಸ್ಮಸ್ ಕೇಕ್ ಅನ್ನು ಹಂಚುವುದರ ಮೂಲಕ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಕೋರಿದರು.
ಗುಡ್ ಶಫರ್ಡ್ ಚರ್ಚಿನ ವತಿಯಿಂದ ಕ್ರಿಸ್ಮಸ್ ಹಬ್ಬದ ಆಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾದಿಗಳಿಗೆ ಕೇಕ್ ಹಂಚುವುದರ ಮೂಲಕ ಶುಭ ಕೋರಿದರು.