Headlines

ಸಿಗಂದೂರು ಸೇತುವೆಗೆ ಚೌಡೇಶ್ವರಿ ಹೆಸರಿಡದಿದ್ದರೆ ಹೋರಾಟದ ಎಚ್ಚರಿಕೆ

ಸಿಗಂದೂರು ಸೇತುವೆಗೆ ಚೌಡೇಶ್ವರಿ ಹೆಸರಿಡದಿದ್ದರೆ ಹೋರಾಟ

ಶಿವಮೊಗ್ಗ – ಸಾಗರ ತಾಲೂಕು ಅಂಬಾರಗೊಡ್ಲು ಬಳಿ  ನಿರ್ಮಿಸಲಾಗಿರುವ ಸೇತುವೆಗೆ ಸಿಗಂಧೂರು ಚೌಡೇಶ್ವರಿ ಸೇತುವೆ ಎಂದು ಹೆಸರಿಡದಿದ್ದಲ್ಲಿ  ಉಗ್ರ ಹೋರಾಟ ನಡೆಸಲಾಗುವುದು ಎಂದು ನಾರಾಯಣಗುರು ವಿಚಾರ ವೇದಿಕೆಯ (ಎಸ್‌ಎನ್‌ಜಿವಿ) ಜಿಲ್ಲಾಧ್ಯಕ್ಷ ಪ್ರವೀಣ್ ಹಿರೆಗೋಡು ಎಚ್ಚರಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಚೌಡೇಶ್ವರಿ ದೇವಸ್ಥಾನದಿಂದಾಗಿ ಆ ಭಾಗ ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಅದೊಂದು ಧರ್ಮಿಕ ಸ್ಥಳವಾಗಿ, ಪ್ರವಾಸಿ ತಾಣವಾಗಿಯೂ ಹೊರಹೊಮ್ಮಿದೆ. ಬೇರೆ ಹೆಸರಿಡುವುದಕ್ಕಿಂತ ಸಿಗಂದೂರು ಚೌಡೇಶ್ವರಿಯ ಹೆಸರಿಡಬೇಕು ಎಂದ ಅವರು, ಶಿಷ್ಟಾಚಾರ ಏನೇ ಇರಬಹುದು. ಧರ್ಮದರ್ಶಿ ರಾಮಪ್ಪನವರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಬೇಕು ಎಂದು  ಒತ್ತಾಯಿಸಿದರು.

ಬಂಟ್ವಾಳ ಬಳಿ  ನಿರ್ಮಾಣವಾದ ಮೇಲುಸೇತುವೆಯನ್ನು ಪ್ರೋಟೊಕಾಲ್ ಉಲ್ಲಂಘಿಸಿ ಕಲ್ಲಡ್ಕ ಪ್ರಭಾಕರ ಭಟ್ಟರಿಂದಲೇ ಉದ್ಘಾಟಿಸಿ, ಶ್ರೀರಾಮ ಸೇತುವೆ ಎಂದು ನಾಮಕರಣ ಮಾಡಲಾಗಿದೆ. ಅದೇ ರೀತಿಯಲ್ಲಿ ಈ ಸೇತುವೆಗೂ ಚೌಡೇಶ್ವರಿ ಹೆಸರು ಇಡಬೇಕು. ಈಗಾಗಲೇ ಸಂಸದರು ಚೌಡೇಶ್ವರಿ ಹೆಸರು ಇಡುವಂತೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಅದರ ಬೆನ್ನಲ್ಲೇ ಬಿಜೆಪಿ ಮುಖಂಡರೊಬ್ಬರು ಯಡಿಯೂರಪ್ಪನವರ ಹೆಸರು ಸೇತುವೆಗೆ ಇಡುವಂತೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇದರ ಹಿಂದೆ ಬೇರೆಯೇ ನಿರ್ಧಾರ ಇದ್ದಂತಿದೆ ಎಂಬ ಅನುಮಾನ ನಮ್ಮದು ಎಂದು ಹೇಳಿದರು.

ಸೋಗಾನೆಯಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಹೆಸರು ನಾಮಕರಣ ಮಾಡುವಂತೆ ಸಂಘಟನೆ ವತಿಯಿಂದ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಅದರೆ ಹಿಂದುಳಿದ ವರ್ಗದವರೆಂಬ ಕಾರಣಕ್ಕೆ ಅದಕ್ಕೆ ಮನ್ನಣೆ ನೀಡಿಲ್ಲ ಎಂಬ ಅಸಮಾಧಾನವಿದೆ. ಈಗ ಸೇತುವೆಗೆ ಶ್ರೀಚೌಡೇಶ್ವರಿ ಹೆಸರು ಅಂತಿಮ ಮಾಡದಿದ್ದರೆ ಹೋರಾಟ ಅನಿವಾರ್ಯ ಎಂದರು.