Headlines

ತಾಯಿಯೊಂದಿಗೆ ಹೊಲಕ್ಕೆ ತೆರಳಿದಾಗ ಬಾಲಕನಿಗೆ ವಿದ್ಯುತ್ ಶಾಕ್ : ಕೈ ಮತ್ತು ಕಾಲಿನ ಬೆರಳುಗಳನ್ನು ಕಟ್ ಮಾಡಿದ ವೈದ್ಯರು |Shivamogga

ತಾಯಿಯೊಂದಿಗೆ ಹೊಲಕ್ಕೆ ತೆರಳಿದಾಗ ಬಾಲಕನಿಗೆ ವಿದ್ಯುತ್ ಶಾಕ್ : ಕೈ ಮತ್ತು ಕಾಲಿನ ಬೆರಳುಗಳನ್ನು ಕಟ್ ಮಾಡಿದ ವೈದ್ಯರು

ತಾಯಿ ಜೊತೆ ಗದ್ದೆಗೆ ಹೋದಾಗ ನೇತು ಬಿದ್ದ ವಿದ್ಯುತ್ ಕಂಬದ ತಂತಿಯಿಂದ ವಿದ್ಯುತ್ ಪ್ರವಹಿಸಿ ಬಾಲಕನ ಕೈ ಮತ್ತು ಕಾಲಿನ ಬೆರಳು ತುಂಡರಿಸುವ ಘಟನೆ ನಡೆದಿದೆ.

ರಾಜ್ಯದಲ್ಲಿ ಈಗಾಗಲೇ ಅನೇಕ ವಿದ್ಯುತ್ ಅವಘಡಗಳಲ್ಲಿ ಸಾವು ನೋವು ಸಂಭವಿಸಿದೆ. ಆದರೆ ಶಿವಮೊಗ್ಗದಲ್ಲಿ ನಡೆದ ಘಟನೆ ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ. ತಾಯಿ ಜೊತೆ ಗದ್ದೆಗೆ ಹೋಗಿದ್ದ ಬಾಲಕನು ವಿದ್ಯುತ್ ಕಂಬದಲ್ಲಿ ನೇತು ಬಿದ್ದ ತಂತಿಯಿಂದ ವಿದ್ಯುತ್ ಶಾಕ್ ಹೊಡೆಸಿಕೊಂಡಿದ್ದಾನೆ. ಈ ಶಾಕ್ ಗೆ ತುತ್ತಾಗಿದ್ದ ವಿಕಲಚೇತನ ಬಾಲಕನ ಕೈ ಮತ್ತು ಕಾಲಿನ ಬೆರಳು ಕಟ್ ಮಾಡಿ ಆಪರೇಷನ್ ಮಾಡಲಾಗಿದೆ. ಬಾಲಕನ ರೋಧನೆ, ತಾಯಿಯ ಅಳಲು ಕಲ್ಲು ಹೃದಯಕ್ಕೂ ಕಣ್ಣೀರು ತರಿಸುವಂತಿದೆ. ಯಾರೋ ಮಾಡಿದ ತಪ್ಪಿಗೆ 11 ವರ್ಷದ ಬಾಲಕನ ಜೀವನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿದ್ಯುತ್ ಶಾಕ್ ಹೊಡೆತಕ್ಕೆ ಕೈ ಮತ್ತು ಕಾಲಿನ ಮೂರು ಬೆರಳನ್ನು ಬಾಲಕ ಕಳೆದುಕೊಂಡಿದ್ದಾನೆ.

ದೀಲಿಪ್ ಎಂಬ 11 ವರ್ಷದ ದಲಿತ ವಿಕಲಚೇತನ ಬಾಲಕ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಬೆಡ್ ಮೇಲೆ ಮಲಗಿ ಚಿತ್ರಹಿಂಸೆ ಅನುಭವಿಸುತ್ತಿದ್ದಾನೆ. ದಿಲೀಪ್ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸ ಜೋಗ್ ಗ್ರಾಮದ ನಿವಾಸಿ. ಇದೇ ಗ್ರಾಮದಲ್ಲಿ ಡಿ. 3 ರಂದು ತಾಯಿ ಜೊತೆ ಗದ್ದೆಗೆ ಹೋದಾಗ ನೇತು ಬಿದ್ದ ವಿದ್ಯುತ್ ಕಂಬದ ತಂತಿಯಿಂದ ಬಾಲಕನಿಗೆ ಶಾಕ್ ಹೊಡೆದಿತ್ತು. ಈ ಶಾಕ್ ಹೊಡೆದ ಪರಿಣಾಮ ಆತನ ಬಲಗೈ ಮತ್ತು ಎಡಗಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಬಾಲಕನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಕೈ ಮತ್ತು ಕಾಲಿನ ಮೂರು ಬೆರಳನ್ನು ಉಳಿಸಿಕೊಳ್ಳುವ ವೈದ್ಯರ ಪ್ರಯತ್ನ ವಿಫಲವಾಗಿದೆ. ಗಾಯ ದಿನೇ ದಿನೇ ಹೆಚ್ಚಾಗಿ ಗ್ಯಾಂಗರೀನ್ ಶುರುವಾಗಿತ್ತು. ಈ ಹಿನ್ನಲೆಯಲ್ಲಿ ವೈದ್ಯರು ಡಿ. 6 ರಂದು ಬಲಗೈ ಪೂರ್ಣ ಕಟ್ ಮಾಡಿದ್ದಾರೆ. ಮತ್ತು ಎಡಗಾಲಿನ ಮೂರು ಬೆರಳು ಕಟ್ ಮಾಡಿ ಆಪರೇಷನ್ ಮಾಡಿದ್ದಾರೆ.

ಈ ಆಪರೇಶನ್ ಬಳಿಕ ಮಗು ಈಗ ಬೆಡ್ ಮೇಲೆ ಒದ್ದಾಡುತ್ತಿದೆ. ಆಪರೇಷನ್ ಬಳಿಕ ನೋವು ತಡೆದುಕೊಳ್ಳಲು ಆಗುತ್ತಿಲ್ಲ. ಚಿಕಿತ್ಸೆ ಮತ್ತು ಡ್ರೆಸ್ಸಿಂಗ್ ಮಾಡುವ ಸಂದರ್ಭದಲ್ಲಿ ಬಾಲಕನು ನೋವಿನಿಂದ ಒದ್ದಾಡುತ್ತಿದ್ದಾನೆ. ಆ ನೋವು ತಾಳಲಾರದೆ ನನ್ನನ್ನು ಸಾಯಿಸಿ ಬಿಡಿ ಎಂದು ವೈದ್ಯರ ಎದುರು ಕಣ್ಣೀರು ಹಾಕಿ ಬೇಡಿಕೊಳ್ಳುತ್ತಿದ್ದಾನೆ. ಇದನ್ನು ನೋಡಿದ ತಾಯಿ ಕಣ್ಣೀರು ಹಾಕಿ ಬೇಸರ ಹೊರಹಾಕುತ್ತಿದ್ದಾರೆ. ತಂದೆ ಇಲ್ಲದ ತಬ್ಬಿಲಿ ಮಗನಿಗೆ ಈ ರೀತಿ ಅನ್ಯಾಯವಾಗಿದೆ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ ಈ ಅವಘಡ ನಡೆದಿದೆ. ತಮ್ಮ ಕುಟುಂಬಕ್ಕೆ ನ್ಯಾಯಬೇಕು. ಸರಕಾರವು ಪರಿಹಾರ ನೀಡಲು ಆಗದಿದ್ದರೇ ನಮ್ಮ ಕುಟುಂಬಕ್ಕೆ ವಿಷ ಕೊಟ್ಟು ಬಿಡಿ ಎಂದು ಬಾಲಕನ ತಾಯಿ ಹತಾಶಳಾಗಿ ಸರಕಾರದ ವಿರುದ್ದ ತನ್ನ ನೋವು ಹೊರಹಾಕಿದ್ದಾರೆ. ಬಾಲಕ ಕೂಡಾ ತಾನು ಐದನೇ ಕ್ಲಾಸ್ ವ್ಯಾಸಾಂಗ ಮಾಡುತ್ತಿದ್ದೆ. ದುರ್ಘಟನೆಯಲ್ಲಿ ನನ್ನ ಬಲಗೈ ಹೋಗಿದೆ. ನನಗೆ ಕೃತಕ ಕೈಗೆ ಸರಕಾರ ವ್ಯವಸ್ಥೆ ಮಾಡಿಕೊಡಬೇಕು. ನಾನು ವಿದ್ಯಾಭ್ಯಾಸ ಮುಂದುವರೆಸುತ್ತೇನೆ. ಓದಿ ದೊಡ್ಡ ವ್ಯಕ್ತಿ ಆಗುತ್ತೇನೆ. ನನಗೆ ಸರಕಾರದ ಸಹಾಯಬೇಕೆಂದು ಬಾಲಕ ಕಣ್ಣೀರು ಹಾಕಿದ್ದಾನೆ.

ಬಾಲಕನಿಗೆ ಶಾಕ್ ಹೊಡೆದು ಇಷ್ಟೆಲ್ಲಾ ಅವಾಂತರ ಆದ್ರೂ ಸ್ಥಳೀಯ ಶಾಸಕ ಶಾಂತನಗೌಡ ಸೇರಿದಂತೆ ಯಾವುದೇ ಆಧಿಕಾರಿಗಳು ಭೇಟಿ ನೀಡಿ ಯಾವುದೇ ಭರವಸೆ ಕುಟುಂಬಕ್ಕೆ ನೀಡಿಲ್ಲ. 10 ವರ್ಷ ಹಿಂದೆ ಮಗುವಿನ ತಂದೆ ಮೃತಪಟ್ಟಿದ್ದಾರೆ. ಸದ್ಯ ದೊಡ್ಡಪ್ಪ ವಿಜಯ ನಾಯ್ಕ, ತಮ್ಮನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ನಡುವೆ ಬೇಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಅನಾಹುತ ಸಂಭವಿಸಿದೆ. 11 ಕೆ.ವಿ ಭಾರದ ತಂತಿಗಳನ್ನು ಆ ಕಂಬಕ್ಕೆ ಹಾಕಿದ್ದರಿಂದ ಅವು ಜೋತು ಬಿದ್ದಿದ್ದವು. ಈ ಸಮಸ್ಯೆ ಕುರಿತು ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದ್ರೂ ಅವರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ತಮ್ಮ ಮಗ ಗದ್ದೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಜೋತು ಬಿದ್ದ ತಂತಿಯಿಂದ ವಿದ್ಯುತ್ ಹರಿದು ಆತ ಗಂಭೀರವಾಗಿ ಗಾಯಗೊಂಡಿದ್ದನು. ಘಟನೆ ನಡೆದು ಒಂದು ತಿಂಗಳು ಕಳೆದು ಬಾಲಕನಿಗೆ ಆಪರೇಷನ್‌ಆದ್ರೂ ಯಾರು ತಿರುಗಿ ನೋಡಿಲ್ಲ. ನಿತ್ಯ ಕಣ್ನೀರಿನಲ್ಲಿ ಕುಟುಂಬಸ್ಥರು ಕೈತೊಳೆದುಕೊಳ್ಳುತ್ತಿದ್ದಾರೆ. ರೈತಾಪಿ ಕುಟುಂಬದ ಪರಿಸ್ಥಿತಿ ಹೀಗಾಗಿದೆ. ಬಡ ರೈತರು ಅಂದ್ರೆ ಸರಕಾರಕ್ಕೆ ಬೆಲೆ ಇಲ್ಲದಂತಾಗಿದೆ. ರೈತ ಬಡ ಮಕ್ಕಳಿಗೆ ಇಷ್ಟೊಂದು ಸಮಸ್ಯೆ ಆದ್ರೂ ದಾವಣಗೆರೆಯ ಜಿಲ್ಲೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಪ್ ಚುಪ್ ಆಗಿರುವುದಕ್ಕೆ ಗಾಯಾಳು ಬಾಲಕನ ದೊಡ್ಡಪ್ಪ ವಿಜಯ್ ನಾಯ್ಕ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಸರಕಾರವು ಚುರುಕಾಗಿ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತದೆ ಎನ್ನುವ ಬಡವರ ಲೆಕ್ಕಾಚಾರ ಸುಳ್ಳಾಗಿದೆ. ವಿದ್ಯುತ್ ಅವಘಡ ನಡೆದು ಒಂದು ತಿಂಗಳಾದ್ರೂ ಯಾರು ಗಮನ ಹರಿಸಿಲ್ಲ. ಇನ್ನೂ ಆಪರೇಶನ್ ಬಳಿಕ ಬಾಲಕನ ಬಲ ಕೈ ಮತ್ತು ಕಾಲಿನ ಮೂರು ಬೆರಳು ಇಲ್ಲದಂತಾಗಿದೆ. ಇಷ್ಟೊಂದು ಕಷ್ಟ ನೋವಿನಲ್ಲಿರುವ ಕುಟುಂಬಕ್ಕೆ ಸರಕಾರದಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಮಾನವೀಯತೆ ಈ ಪ್ರಕರಣದಲ್ಲಿ ಸತ್ತು ಹೋಗಿರುವುದು ಮಾತ್ರ ವಿಪರ್ಯಾಸ.

Leave a Reply

Your email address will not be published. Required fields are marked *