ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಪಿಎಸ್‌ಐ ಪ್ರವೀಣ್ ಎಸ್ ಪಿ ಖಡಕ್ ವಾರ್ನಿಂಗ್
ರಿಪ್ಪನ್‌ಪೇಟೆ : ಕಾನೂನು ಎಲ್ಲರಿಗೂ ಒಂದೇ ಅದನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕಾಗುವುದೆಂದು ಪಿಎಸ್‌ಐ ಎಸ್.ಪಿ.ಪ್ರವೀಣ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಠಾಣೆಯಲ್ಲಿ ಇಂದು ಬಕ್ರೀದ್ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪದೇಪದೆ ಅಪರಾಧ ಎಸಗುವವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಅಪರಾಧ ಕೃತ್ಯಗಳು ಸಂಭವಿಸುವ ಮೊದಲೇ ಅಥವಾ ನಂತರದಲ್ಲೂ ತಮಗೆ ಸಿಕ್ಕ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು ಎಂದರು.
ಠಾಣೆಗೆ ಬರುವ ಬಡವರು, ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ಭರವಸೆ ಹುಟ್ಟುವ ರೀತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿದ್ದು ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಠಾಣೆ ಬಂದು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದರು.
ಸಭೆಯಲ್ಲಿದ್ದ ಸಾರ್ವಜನಿಕರು ಪಟ್ಟಣದ ವ್ಯಾಪ್ತಿಯಲ್ಲಿ ಯುವಕರು ಗಾಂಜಾ ಸೇವನೆ ದಾಸರಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೊರಲಿನ ಮನವಿ ಸಲ್ಲಿಸಿ , ತೀರ್ಥಹಳ್ಳಿ ರಸ್ತೆಯ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ವಾಹನಗಳ ದಟ್ಟಣೆಯಿಂದಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ತಂದು ಈ ಹಿಂದೆ ತಾವು ಠಾಣಾಧಿಕಾರಿಯಾಗಿದ್ದಾಗ ನಾಲ್ಕು ರಸ್ತೆಯಲ್ಲಿ ದಿನ ಬಿಟ್ಟು ದಿನ ಒಂದೊಂದು ಕಡೆಯಲ್ಲಿ ವಾಹನ ನಿಲುಗಡೆ ಮಾಡುವಂತೆ ಕಡ್ಡಾಯ ಜಾರಿಗೊಳಿಸಿದ್ದು ಈಗ ಅದು ಇಲ್ಲದಂತಾಗಿ ವಿದ್ಯಾರ್ಥಿಗಳು, ವಯೋವೃದ್ದರು, ಮಹಿಳೆಯರು ರಸ್ತೆ ದಾಟುವುದು ಕಷ್ಟಕರವಾಗಿದೆ.ಇರುವ ಒಂದು ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿಯಿಂದ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಠಾಣಾಧಿಕಾರಿಗಳ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್‌ಐ ಪ್ರವೀಣ್ ಎಸ್ ಪಿ ಇಂದಿನಿಂದಲೇ ಈ ಮೇಲ್ಕಂಡ ಹಲವು ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿ ಗಾಂಜಾ ಗಿರಾಕಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು. ಹಾಗೇಯೆ ಗಾಂಜಾ ಸೇವನೆ ಹಾಗೂ ಮಾರಾಟದ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು 9480803365 ನಂಬರಿಗೆ ಕರೆ ಮಾಡುವ ಮೂಲಕ ತಿಳಿಸುವ ಮೂಲಕ ಇಲಾಖೆಗೆ ಸಹಕರಿಸಬೇಕಾಗಿದೆ ಹಾಗೇಯೇ ಮಾಹಿತಿದಾರರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅರ್ ಎ ಚಾಬುಸಾಬ್ ,ಸುರೇಶ್ ಸಿಂಗ್ , ಟಿ ಆರ್ ಕೃಷ್ಣಪ್ಪ ಜುಮ್ಮಾ ಮಸೀದಿ ಕಾರ್ಯದರ್ಶಿ ಶೇಖಬ್ಬ, ಎಂ.ಸುರೇಶ್‌ಸಿಂಗ್, ಕುಕ್ಕಳಲೇ ಈಶ್ವರಪ್ಪ ಶೇಖಬ್ಬ , ಪಿಯೂಸ್ ,ಅಕ್ಬರ್ , ಮುರುಳಿ ಕೆರೆಹಳ್ಳಿ , ರವೀಂದ್ರ ಕೆರೆಹಳ್ಳಿ , ಶ್ರೀಧರ್ , ತ ಮ ನರಸಿಂಹ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
 
                         
                         
                         
                         
                         
                         
                         
                         
                         
                        