Ripponpete | ಸರ್ಕಾರಿ ಶಾಲೆಯ ಜೀರ್ಣೋದ್ಧಾರಕ್ಕಾಗಿ ಸಮವಸ್ತ್ರ ಕಳಚಿ ಶ್ರಮದಾನಕ್ಕೆ ಮುಂದಾದ ಪೊಲೀಸರು
ರಿಪ್ಪನ್‌ಪೇಟೆ : ಪಟ್ಟಣದ ಬರುವೆ ಸರ್ಕಾರಿ ಶಾಲಾ ಆವರಣದಲ್ಲಿ ಇಂದು ನಡೆದ ಸುಣ್ಣಬಣ್ಣ ಅಭಿಯಾನವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.
ಹೌದು… ಕಾನೂನು ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪಟ್ಟಣದ ಪೊಲೀಸ್ ಸಿಬ್ಬಂದಿಗಳು ಇಂದು ಬೆಳಿಗ್ಗೆ ಠಾಣೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಸಮವಸ್ತ್ರ ಕಳಚಿಟ್ಟು ಏಳು ದಶಕಗಳ ಇತಿಹಾಸವಿರುವ ಸರ್ಕಾರಿ ಶಾಲೆಯ ಪುನರ್ ನವೀಕರಣಕ್ಕಾಗಿ ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಭಾಜನರಾಗಿದ್ದಾರೆ.
ಪಟ್ಟಣದ ಬರುವೆ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಬಳಗ ಆಯೋಜಿಸಿದ್ದ ಸುಣ್ಣಬಣ್ಣ ಅಭಿಯಾನದಡಿಯಲ್ಲಿ ಕತ್ತಿ, ದೊಣ್ಣೆ ಗುದ್ದಲಿಗಳನ್ನು ಹಿಡಿದು ಕಟ್ಟಡ ಕಾರ್ಮಿಕರ ರೀತಿಯಲ್ಲಿ ಗಿಡಗಂಟಿಗಳನ್ನು ಕಡಿದು,ಬಣ್ಣಕ್ಕಾಗಿ ಕಾಂಪೌಡ್ ಶುಚಿಗೊಳಿಸಿ,ಸುತ್ತಮುತ್ತಲಿನ ಕಸವನ್ನು ತೆಗೆದು, ಇಡೀ ಶಾಲಾ ಆವರಣವನ್ನು ಸ್ವಚ್ಚಗೊಳಿಸಿ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಹಬ್ಬವನ್ನು ಆಚರಿಸಿದರು.
ಪೊಲೀಸರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ಸಾರ್ವಜನಿಕರು ಹಾಗೂ ದಾರಿಹೋಕರು ಇವರ ಕಾರ್ಯವೈಖರಿಯನ್ನು ಗಮನಿಸುತ್ತಾ ಅವರುಗಳಿಗೆ ಅಭಿನಂದನೆ ಸಲ್ಲಿಸುತಿದ್ದದ್ದು ಕಂಡುಬಂದಿತು.
ಶ್ರಮದಾನ ನೆರವೇರಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ಸಡಗರ ಹಾಗೂ ಸಂಭ್ರಮದಿಂದ ಉಪಹಾರವನ್ನು ಬಡಿಸುತಿದ್ದ ದೃಶ್ಯ ರೋಮಾಂಚನಗೊಳಿಸುವಂತಿತ್ತು.
ಒಟ್ಟಾರೆಯಾಗಿ ಕಾನೂನು ಸುವ್ಯವಸ್ಥೆಯನ್ನು ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ರಾಜ್ಯಾದ್ಯಂತ ಉತ್ತಮ ಹೆಸರನ್ನು ಪಡೆದಿರುವ ರಿಪ್ಪನ್‌ಪೇಟೆ ಪೊಲೀಸರು ಇಂದು ಸರ್ಕಾರಿ ಶಾಲೆ ಬಗ್ಗೆ ಇರುವ ತಮ್ಮ ಒಲವನ್ನು ಈ ರೀತಿಯಲ್ಲಿ ವ್ಯಕ್ತಪಡಿಸುವುದರ ಮೂಲಕ ಸಮಾಜಕ್ಕೆ ಮಾದರಿಯಾದರು.