ರಿಪ್ಪನ್‌ಪೇಟೆ : ಬೀದಿನಾಯಿಗಳಿಂದ ಜಿಂಕೆಮರಿ ರಕ್ಷಣೆ
ಕಾಡಿನಿಂದ ನಾಡಿನತ್ತ ಬಂದ ಜಿಂಕೆಯ ಮರಿಗೆ ನಾಯಿಗಳು ಬೆನ್ನಟ್ಟಿದಾಗ ಸ್ಥಳೀಯರು ಜಿಂಕೆ ಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ವಡಗೆರೆ ಗ್ರಾಮದ ಬಳಿ ಇಂದು ನಡೆದಿದೆ.
ಅರಣ್ಯದಿಂದ ರಿಪ್ಪನ್‌ಪೇಟೆ ಸಮೀಪದ ವಡಗೆರೆ ಗ್ರಾಮದ ಅಮರ್ ನಾಥ್ ಕಾಮತ್ ರವರ ತೋಟದ ಬಳಿ ಬಂದ ಜಿಂಕೆ ಮರಿಯನ್ನು ಕಂಡು ಬೀದಿ ನಾಯಿಗಳು ಬೆನ್ನಟ್ಟಿವೆ. ಈ ವೇಳೆ ನಾಯಿಗಳಿಂದ ಪ್ರಾಣ ರಕ್ಷಣೆಗೆ ಜಿಂಕೆ ಮರಿ ಆ ಜಮೀನಿನಲ್ಲಿದ್ದ ಶಿವಾನಂದ ಎಂಬುವವರ ಮನೆಯ ಜಗುಲಿಯಲ್ಲಿ ಆಶ್ರಯ ಪಡೆದಿದ್ದು ಈ ಸಂಧರ್ಭದಲ್ಲಿ ಸ್ಥಳೀಯರು ಅರಣ್ಯ ಸಂಚಾರಿ ದಳ ಸಾಗರ ವಿಭಾಗದ ಪಿಎಸ್‌ಐ ವಿನಾಯಕ್ ರವರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕಾಗಮಿಸಿದ ಪಿಎಸ್‌ಐ ವಿನಾಯಕ್ ಹಾಗೂ ಸಿಬ್ಬಂದಿಗಳ ತಂಡ ಬೀದಿನಾಯಿಗಳ ದಾಳಿಯಿಂದ ಗಾಬರಿಗೊಂಡಿದ್ದ ಜಿಂಕೆಮರಿಯನ್ನು ಉಪಚರಿಸಿ ಅರಸಾಳು ವಲಯ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.