ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಾಯಿಗೆ 30 ಸಾವಿರ ರೂ. ದಂಡ
ಶಿವಮೊಗ್ಗ : 17 ವರ್ಷದ ಬಾಲಕನಿಗೆ ವಾಹನ ಚಾಲನ ಪರವಾನಗಿ ಇಲ್ಲದೇ ದ್ವಿಚಕ್ರ ವಾಹನ ನೀಡಿದ್ದ ತಾಯಿಗೆ ಶಿವಮೊಗ್ಗ ನ್ಯಾಯಾಲಯ 30 ಸಾವಿರ ರೂ. ದಂಡ ವಿಧಿಸಿದೆ.
ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ಪಿಎಂ ರಸ್ತೆ ಬಳಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಬಾಲಕನನ್ನು ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ, ಆತ ಅಪ್ರಾಪ್ತನಾಗಿರುವುದು ಮತ್ತು ಚಲಾಯಿಸುತ್ತಿದ್ದ ಬೈಕ್ ಆತನ ತಾಯಿಯದು ಎಂದು ತಿಳಿದು ಬಂದಿತ್ತು.
ಹೀಗಾಗಿ ಪೂರ್ವ ಸಂಚಾರಿ ಪೊಲೀಸರು, ಸಂಚಾರಿ ನಿಯಮ ಉಲ್ಲಂಘನೆ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ವಾಹನ ಮಾಲೀಕರಾದ ಆತನ ತಾಯಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು.
ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣ ವರದಿಯನ್ನು ಸಲ್ಲಿಸಿದ್ದರು. ಈ ಕುರಿತು ಶಿವಮೊಗ್ಗ 3 ನೇ ಎ ಸಿ ಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಬೈಕ್ ಮಾಲೀಕರಿಗೆ ದಂಡವನ್ನು ವಿಧಿಸಿ ಆದೇಶಿಸಿದೆ.