ಎಟಿಎಂನಲ್ಲಿ ರೈತನಿಗೆ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯಿಂದ ವಂಚನೆ
ಆಯನೂರು : ಎಟಿಎಂ ಕೇಂದ್ರದಲ್ಲಿ ಹಣ ಬಿಡಿಸಲು ನೆರವು ನೀಡುವಂತೆ ನಟಿಸಿ, ATM ಕಾರ್ಡ್ ಬದಲಿಸಿ ರೈತರೊಬ್ಬರಿಗೆ ವಂಚಿಸಲಾಗಿದೆ. ಎಟಿಎಂ ಕಾರ್ಡ್ ಅದಲು ಬದಲಾಗಿ 20 ನಿಮಿಷದ ಒಳಗೆ 40 ಸಾವಿರ ರೂ. ಹಣ ಡ್ರಾ ಮಾಡಿ ವಂಚಿಸಿರುವ ಘಟನೆ ನಡೆದಿದೆ.
ಹಾರ್ನಳ್ಳಿ ಗ್ರಾಮದ ದೇವಪ್ಪ, ಆಯನೂರಿನ ಬ್ಯಾಂಕ್ ಒಂದರ ಎಟಿಎಂ ಸೆಂಟರ್‌ನಲ್ಲಿ ಹಣ ಬಿಡಿಸಲು ತೆರಳಿದ್ದಾಗ ಘಟನೆ ಸಂಭವಿಸಿದೆ. ಅಪರಿಚಿತರು ದೇವಪ್ಪ ಅವರಿಗೆ ಹಣ ಬಿಡಿಸಲು ನೆರವಾಗಿದ್ದರು. ದೇವಪ್ಪ ಅವರು ಸೂಚಿಸಿದಂತೆ 10 ಸಾವಿರ ರೂ. ಬಿಡಿಸಿ ಕೊಟ್ಟಿದ್ದರು. ಎಟಿಎಂ ಮೆಷಿನ್‌ನಿಂದ ಕಾರ್ಡ್ ಹೊರತೆಗೆದು ಕೊಡುವಾಗ ಆ ಅಪರಿಚಿತರು, ದೇವಪ್ಪ ಅವರ ಕಾರ್ಡ್ ಬದಲು ಬೇರೊಂದು ಕಾರ್ಡ್ ಕೊಟ್ಟಿದ್ದರು.
ಎಟಿಎಂ ಕಾರ್ಡ್ ಬದಲಾದ ವಿಚಾರ ಕೇವಲ 20 ನಿಮಿಷದಲ್ಲಿ ದೇವಪ್ಪ ಅವರಿಗೆ ಗೊತ್ತಾಗಿತ್ತು. ಕೂಡಲೆ ಬ್ಯಾಂಕ್‌ನ ಕಾಲ್ ಸೆಂಟರ್‌ಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿಸಿದ್ದರು. ಅಷ್ಟರಲ್ಲಾಗಲೆ ವಂಚಕರು ಹಾರನಹಳ್ಳಿ ಮತ್ತು ಸವಳಂಗದ ಎಟಿಎಂ ಕೇಂದ್ರಗಳಿಂದ 40 ಸಾವಿರ ರೂ. ಹಣ ವಿತ್ ಡ್ರಾ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.