ಹಣಗೆರೆಕಟ್ಟೆ ಲಾಡ್ಜ್ ನಲ್ಲಿ ಯುವತಿಯ ಕೊಲೆಗೈದಿದ್ದ ಆರೋಪಿಯ ಬಂಧನ
ಶಿವಮೊಗ್ಗ : ಇಲ್ಲಿನ ಹಣಗೆರೆಕಟ್ಟೆಯ ಲಾಡ್ಜ್‌ವೊಂದರಲ್ಲಿ ಎಂಟು ತಿಂಗಳ ಹಿಂದೆ ನಡೆದಿದ್ದ ಯುವತಿಯ ಕೊಲೆ ಪ್ರಕರಣದ ಆರೋಪಿಯನ್ನ ಮಾಳೂರು ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿರುವ ಪೊಲೀಸರು ಮಾಳೂರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಇದೀಗ ಮುಂದಿನ ಕಾನೂನು ಪ್ರಕ್ರಿಯೆಗಳನ್ನ ನಡೆಸುತ್ತಿದ್ದಾರೆ.
2024 ರ ಏಪ್ರಿಲ್ 4 ರಂದು ಹಣಗೆರೆ ಕಟ್ಟೆಯ ಲಾಡ್ಜ್ ವೊಂದರಲ್ಲಿ ಯುವತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಧಾರ್ಮಿಕ ಕ್ಷೇತ್ರದ ಸನ್ನಿದಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಈ ಪ್ರದೇಶದಲ್ಲಿ ಕಾನೂನು ಬಾಹಿರ ಚುಟವಟಿಕೆ ನಡೆಯುತ್ತಿದೆಯೆ ಎಂಬ ಅನುಮಾನಕ್ಕೂ ಕಾರಣವಾಗಿತ್ತು. ಅಲ್ಲದೆ ಪ್ರಕರಣದಲ್ಲಿ ಯಾವೊಂದು ಸುಳಿವು ಸಹ ಸಿಕ್ಕಿರಲಿಲ್ಲ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೆಲ್ಲಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಆನಂತರ ಕೆಲವು ದಿನಗಳ ತನಿಖೆಯ ಬಳಿಕ ಲಾಡ್ಜ್ ನಲ್ಲಿ ಕೊಲೆಯಾದ ಯುವತಿ ಶಿವಮೊಗ್ಗದ ಬಾಪೂಜಿ ನಗರದ ನಿವಾಸಿ ಉಮಾ ಎಂದು ಗೊತ್ತಾಗಿತ್ತು.
ಪೊಲೀಸರಿಗೆ ಕೊಲೆಯಾದ ಯುವತಿಯ ಬಗ್ಗೆ ಮಾಹಿತಿ ಲಭ್ಯವಾಗಿದ ಬಳಿಕವೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಏಕೆಂದರೆ ಪ್ರಕರಣದ ಆರೋಪಿ ಪತ್ತೆಯಾಗಿರಲಿಲ್ಲ. ಇದೀಗ ಆರೋಪಿ ಪತ್ತೆಯಾಗಿದ್ದು, ದಿನ ಪೊಲೀಸರ ಕೈಗೆ ಸಿಗದೇ ತಲೆಮೆರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಹಿಡಿದು ತಂದಿರುವ ಬಗ್ಗೆ ಮಾಹಿತಿ ಇದೆ. ಆದಾಗ್ಯು ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಸಿಗಬೇಕಿದೆ.