ನಿಟ್ಟೂರು ಗ್ರಾಪಂ ಸದಸ್ಯನ ಮೇಲೆ ಹಲ್ಲೆ – ಆರೋಪಿಯನ್ನು ಬಂಧಿಸಿ ಗೂಂಡಾ ಕಾಯ್ದೆ ಜಾರಿಗೆ ಸಾರ್ವಜನಿಕರ ಮನವಿ
ಹಳೇ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ನಿಟ್ಟೂರು ಗ್ರಾಮದ ಸಾರ್ವಜನಿಕರು ನಗರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ನಿಟ್ಟೂರು ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ನಾಗೋಡಿ ವಿಶ್ವನಾಥ್ ಎಂಬುವವರ ಮೇಲೆ ಬಿಜೆಪಿ ಕಾರ್ಯಕರ್ತ ದೇವರಾಜ್ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿ ,ಮರ್ಮಾಂಗವನ್ನು ಹಿಸುಕಿ ಕೊಲೆಗೆ ಯತ್ನಿಸಿರುವ ಬಗ್ಗೆ ಈಗಾಗಲೇ ದೂರು ದಾಖಲಾಗಿದೆ.
ನಿಟ್ಟೂರು ಗ್ರಾಮದ ರಸ್ತೆ ಬದಿಯಲ್ಲಿ ನಿಂತಿದ್ದ ದೇವರಾಜ್ ಬೈಕ್ ನಲ್ಲಿ ಹೋಗುತಿದ್ದ ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್ ರನ್ನು ನಿಲ್ಲಿಸಿ ಏಕಾಏಕಿ ಹಲ್ಲೆ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಮನವಿ ಸಲ್ಲಿಸಿರುವ ಸಾರ್ವಜನಿಕರು ನಿಟ್ಟೂರು ಗ್ರಾಮ ಶಿವಮೊಗ್ಗ ಜಿಲ್ಲೆಯ ಕೊನೆಯ ಗ್ರಾಮವಾಗಿದ್ದು, ಪೊಲೀಸ್ ಠಾಣಾ ವ್ಯಾಪ್ತಿಯಿಂದ ಸುಮಾರು 30 ಕಿ.ಮೀ ದೂರದ ಗ್ರಾಮವಾಗಿದ್ದು, ಈ ಗ್ರಾಮದಲ್ಲಿ ಇತ್ತೀಚಿಗೆ 4-5 ವರ್ಷಗಳಿಂದ ದೇವರಾಜ ಎಂಬಾತ ಒಂದು ನಾಮಕಾವಸ್ಥೆಗೆ ತರಕಾರಿ ಅಂಗಡಿ ಇಟ್ಟುಕೊಂಡು ಮುಗ್ಧ ಹಳ್ಳಿ ಜನರಿಗೆ ಹೆದರಿಸುವುದು ಬೆದರಿಸುವುದು ಮಾಡುತ್ತಿದ್ದು, ಈತನ ವಿರುದ್ಧ ಜನ ಸಾಮಾನ್ಯರು ಠಾಣೆಗೆ ಬಂದು ದೂರು ನೀಡಲು ಹೆದರುತ್ತಿದ್ದು, ಅನೇಕ ಬಾರಿ ಗಲಭೆ ಮಾಡಿದರು ಸಹ ಈತನ ವಿರುದ್ಧ ಯಾವುದೇ ದೂರು ನೀಡಲು ಯಾರು ಸಹ ಮುಂದೆ ಬಂದಿರುವುದಿಲ್ಲ. ಈತನು ತಾನು ಪ್ರಭಾವಿ ನನ್ನ ಹತ್ತಿರ ಹಣವಿದೆ, ತೋಳಬಲವಿದೆ, ನನ್ನನ್ನು ಯಾರು ಸಹ ಏನು ಮಾಡಲು ಆಗುವುದಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದು ಈತನ ದಬ್ಬಾಳಿಕೆ, ದೌರ್ಜನ್ಯಕ್ಕೆ ಸಂಪೂರ್ಣ ನಿಟ್ಟೂರು ಪಂಚಾಯ್ತಿ ಜನರು ಹೆದರಿ ಬದುಕುವಂತಹ ಪರಿಸ್ಥಿತಿ ಇದ್ದು, ಇದೇ ರೀತಿ ನಿನ್ನೆ ದಿ:15-12-2024 ರಂದು ಹಾಡುಹಗಲೆ ಜನದಂದಣಿ ಇರುವಾಗಲೇ ಪ್ರತಿಷ್ಠಿತ ಗ್ರಾಮ ಪಂಚಾಯ್ತಿ ಸದಸ್ಯರಿಗೆ ತನ್ನ ದೌರ್ಜನ್ಯ ತೋರಿಸಿ, ದರ್ಪ ಮೆರೆದು ಹಲ್ಲೆ ನಡೆಸಿ, ಮಾರಣಾಂತಿಕ ಹಲ್ಲೆವೆಸಗಿರುವುದು ಖಂಡನೀಯವಾಗಿದ್ದು, ಈತನೊಬ್ಬ ಕ್ರೂರ ಪ್ರವೃತ್ತಿ ಹಿನ್ನಲೆ ವ್ಯಕ್ತಿಯಾಗಿದ್ದು, ಈತನ ಮೇಲೆ ಸಂಬಂಧಪಟ್ಟ ಇಲಾಖೆಗಳು, ಸೂಕ್ತ ಕ್ರಮಕೈಗೊಂಡು, ಈತನ ದೌರ್ಜನ್ಯಕ್ಕೆ ಕಡಿವಾಣ ಹಾಕದೆ ಇದ್ದರೆ ನಿಟ್ಟೂರಿನಂತಹ ಜಿಲ್ಲೆಯ ಕೊನೆ ಗ್ರಾಮಕ್ಕೆ ಶಾಂತಿ ಮರಿಚೀಕೆಯಾಗುವಂತಯಹ ಸ್ಥಿತಿ ಇದ್ದು, ಜನ ಸಾಮಾನ್ಯರು ನೆಮ್ಮದಿಯಿಂದ, ಶಾಂತಿಯಿಂದ ಬದುಕಲು ಸಹ ಕಷ್ಟವಾಗುತ್ತಿದ್ದು, ಈತನ ಮೇಲೆ ಈ ಹಿಂದೆ ಸರ್ಕಾರಿ ಇಲಾಖೆ ಅಧಿಕಾರಿಗಳ ಮೇಲು ಸಹ ಗಲಾಟೆ ಮಾಡಿರುವಂತಹ ದೂರುಗಳು ಇದ್ದು, ಈತನ ದರ್ಪಕ್ಕೆ, ದೌರ್ಜನ್ಯಕ್ಕೆ, ದುರಂಕಾರಕ್ಕೆ ಅಂತ್ಯ ಹಾಡಬೇಕೆಂದು ಸಮಸ್ತ ನಿಟ್ಟೂರು ಪಂಚಾಯ್ತಿ ಸಾರ್ವಜನಿಕರ ಆಗ್ರಹವಾಗಿರುತ್ತದೆ.
ಈತನ ವಿರುದ್ಧ ಸರಿಯಾದ ಕ್ರಮಕೈಗೊಳ್ಳದೆ ಇದ್ದಲ್ಲಿ ನಿಟ್ಟೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಈತನಿಂದ ದೊಡ್ಡ ಅನಾಹುತವೇ ಸಂಭವಿಸುವುದರಲ್ಲಿ ಅನುಮಾನ ಇರುವುದಿಲ್ಲ. ಆದ್ದರಿಂದ ಈತನ ಮೇಲೆ ಸರಿಯಾದ ಕಾನೂನು ಕ್ರಮಕೈಗೊಂಡು ಈತನ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಹೊಸನಗರ ತಾಲೂಕ್ ಕೆಡಿಪಿ ಸದಸ್ಯರಾದ ನಾಗೇಂದ್ರ ಜೋಗಿ , ಗ್ರಾಪಂ ಸದಸ್ಯರಾದ ಅಶೋಕ್ ಕುಂಬ್ಳೆ , ಶೋಭಾ ಉದಯ್ ,ರಾಘವೇಂದ್ರ ಆಚಾರ್ ,ಪ್ರಮುಖರಾದ ಸತ್ಯನಾರಾಯಣ ಕೊಳಕಿ , ಮಂಜಪ್ಪ ಬೆನ್ನಟ್ಟೇ ,ರವಿ ಚನ್ನಪ್ಪ ಹಾಗೂ ಇನ್ನಿತರರಿದ್ದರು.