ನಿಟ್ಟೂರು ಗ್ರಾಪಂ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ – ಸಿಸಿಟಿವಿ ದೃಶ್ಯಾವಳಿ ವೈರಲ್
ಹಳೇ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಗ್ರಾಪಂ ಸದಸ್ಯನೊಬ್ಬನ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಹೊಸನಗರ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಭಾನುವಾರ ನಡೆದಿದ್ದು ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.
ನಿಟ್ಟೂರು ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ನಾಗೋಡಿ ವಿಶ್ವನಾಥ್ ಎಂಬುವವರ ಮೇಲೆ ದೇವರಾಜ್ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿ ,ಮರ್ಮಾಂಗವನ್ನು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.
ನಿಟ್ಟೂರು ಗ್ರಾಮದ ರಸ್ತೆ ಬದಿಯಲ್ಲಿ ನಿಂತಿದ್ದ ದೇವರಾಜ್ ಬೈಕ್ ನಲ್ಲಿ ಹೋಗುತಿದ್ದ ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್ ರನ್ನು ನಿಲ್ಲಿಸಿ ಏಕಾಏಕಿ ಹಲ್ಲೆ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಹಲ್ಲೆ ಪೂರ್ವನಿಯೋಜಿತ ಕೃತ್ಯವೆಂದು ಹೇಳಲಾಗುತ್ತಿದೆ.
ಗಾಯಾಳು ನಾಗೋಡಿ ವಿಶ್ವನಾಥ್ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಲ್ಲೆಯನ್ನು ಖಂಡಿಸಿದ ನಿಟ್ಟೂರು ಕಾಂಗ್ರೆಸ್
ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್ ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಿಜೆಪಿ ಕಾರ್ಯಕರ್ತ ದೇವರಾಜ್ ನಡೆಯನ್ನು ನಿಟ್ಟೂರು ಕಾಂಗ್ರೆಸ್ ಖಂಡಿಸುತ್ತದೆ. ದೇವರಾಜ್ ಈಗಾಗಲೇ ಹಲವಾರು ಹಲ್ಲೆ ಪ್ರಕರಣಗಳನ್ನು ನಡೆಸಿದ್ದು ಆತನ ಗೂಂಡಾ ವರ್ತನೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.ಕೂಡಲೇ ದೇವರಾಜ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ,ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ,ಮಂಜಪ್ಪ ಚನ್ನಪ್ಪ ,ರವಿಚನ್ನಪ್ಪ , ಉದಯ್ ಗೌರಿಕೆರೆ ,ರಾಘವೇಂದ್ರ ,ಕೊಲ್ಕಿ ನಾರಾಯಣಪ್ಪ , ಧರ್ಮೇಂದ್ರ ಸಂಪೆಕಟ್ಟೆ ಹಾಗೂ ಇನ್ನಿತರರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್ ರಾಜಕೀಯ ಏಳಿಗೆಯನ್ನು ಸಹಿಸದ ಕೆಲವು ಬಂಡವಾಳಶಾಹಿಗಳ ಕುಮ್ಮಕ್ಕಿನಿಂದ ಈ ಹಲ್ಲೆ ನಡೆದಿದ್ದು ಈ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ಸಂಪೂರ್ಣ ತನಿಖೆ ಕೈಗೊಂಡು ಗೂಂಡಾ ಪ್ರವೃತ್ತಿವುಳ್ಳವರನ್ನು ಗಡಿಪಾರು ಮಾಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಪ್ರತಿಭಟನೆ ನಡೆಸಲಾಗುವುದು.
ನಾಗೇಂದ್ರ ಜೋಗಿ
ಕೆಡಿಪಿ ಸದಸ್ಯರು ಹೊಸನಗರ
ನಿಟ್ಟೂರು ಕಾಂಗ್ರೆಸ್ ಘಟಕದ ಅಧ್ಯಕ್ಷರು