ಮಂಗಳೂರಿನಿಂದ ಜೋಗಕ್ಕೆ ತೆರಳುತಿದ್ದ ಪ್ರವಾಸಿ ಬಸ್ ಮಗುಚಿ ಹಲವರಿಗೆ ಗಂಭೀರ ಗಾಯ – ಮಣಿಪಾಲ್ , ಮಂಗಳೂರಿಗೆ ಗಾಯಾಳುಗಳ ರವಾನೆ
ಶಿವಮೊಗ್ಗ : ಮಂಗಳೂರಿನಿಂದ ಜೋಗಕ್ಕೆ ಹೊರಟಿದ್ದ ಖಾಸಗಿ ಬಸ್ ಸಾಗರದ ಮುಪ್ಪಾನೆ ಬಳಿ ಪಲ್ಟಿಯಾಗಿ ಬಸ್ ನಲ್ಲಿದ್ದ 27 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಮಂಗಳೂರಿನಿಂದ ಭಟ್ಕಳ ಮತ್ತು ಜೋಗಕ್ಕೆ ಬರುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಸಾಗರದ ಮುಪ್ಪಾನೆ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಪ್ರಯಾಣಿಕರೆಲ್ಲಾರೂ ಮಂಗಳೂರು ಮೂಲದವರೆಂದು ತಿಳಿದುಬಂದಿದ್ದು ಬಸ್ ನಲ್ಲಿ 49 ಜನ ಪ್ರಯಾಣಿಕರಿದ್ದು 27 ಜನರಿಗೆ ಗಂಭೀರ ಗಾಯವಾಗಿದೆ. ಇವರಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ 16 ರಿಂದ 18 ಆಂಬುಲೆನ್ಸ್ ಗಳಲ್ಲಿ ಮಣಿಪಾಲ್ ಹಾಗೂ ಮಂಗಳೂರಿಗೆ ರವಾನಿಸಲಾಗಿದೆ.
ಅಪಘಾತದ ವಿಷಯ ತಿಳಿಯುತಿದ್ದಂತೆ ಆಸ್ಪತ್ರೆಗೆ ದಿಡೀರ್ ದೌಡಾಯಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಖುದ್ದು ನಿಂತು ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ದೊರಕಿಸಿಕೊಟ್ಟು ಸ್ವಂತ ಖರ್ಚಿನಲ್ಲಿ ಮಂಗಳೂರು ಹಾಗೂ ಮಣಿಪಾಲ್ ಗೆ ಆಂಬುಲೆನ್ಸ್ ವ್ಯವಸ್ತೆ ಮಾಡಿಕೊಟ್ಟಿದ್ದಾರೆ.
ನಂತರ ಮಾತನಾಡಿದ ಶಾಸಕ ಬೇಳೂರು ಮಂಗಳೂರು ಪುತ್ತೂರು ಸಮೀಪದಿಂದ ಬಂದಿರುವ ಪ್ರವಾಸಿಗರ ಬಸ್ಸು ಕಾರ್ಗಲ್ ಬಳಿ ಅಪಘಾತವಾಗಿದ್ದು ಈ ಬಗ್ಗೆ ಅಲ್ಲಿನ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಕರೆ ಮಾಡಿದ ನಂತರ ನನಗೆ ವಿಷಯ ತಿಳಿದಿದ್ದು ಕೂಡಲೇ ಆಸ್ಪತ್ರೆಗೆ ಧಾವಿಸಿ ಬಂದು ಸೂಕ್ತ ಚಿಕಿತ್ಸೆಗೆ ಸೂಚಿಸಿ ಎಲ್ಲಾ ಗಾಯಾಳುಗಳಿಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇನೆ , ಈ ಸಂಧರ್ಭದಲ್ಲಿ ಸ್ಥಳೀಯರು , ಪತ್ರಕರ್ತರು , ಆಂಬುಲೆನ್ಸ್ ಚಾಲಕರು , ವೈದ್ಯರು ಸಕಾಲಕ್ಕೆ ಸ್ಪಂದಿಸಿದ್ದಾರೆ ಅವರೆಲ್ಲಾರಿಗೂ ಧನ್ಯವಾದಗಳು ಎಂದರು.
ರಜೆ ಇದ್ದ ಕಾರಣ ಕುಟುಂಬಸ್ಥರೆಲ್ಲ ವಾಹನ ಮಾಡಿಕೊಂಡು ಪ್ರವಾಸಿ ತಾಣಗಳಿಗೆ ತೆರಳಿತ್ತಿದ್ದಾಗ ಈ ಘಟನೆ ನಡೆದಿದೆ.
ಕಾರ್ಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.