ನಿಟ್ಟೂರು ಆಸ್ಪತ್ರೆಗೆ ಶಾಸಕ ಬೇಳೂರು ದಿಢೀರ್ ಭೇಟಿ-ಪರಿಶೀಲನೆ
ಹೊಸನಗರ : ಅವಧಿ ಮೀರಿದ ಔಷಧಿ ವಿತರಣೆ, ಸುಚಿತ್ವದ ಕೊರತೆ ದೂರಿನ ಬೆನ್ನಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ತಾಲೂಕಿನ ನಿಟ್ಟೂರು ಗ್ರಾಮದ ಸರಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ವತಹ ಶಾಸಕರೇ ಶೌಚಾಲಯ ಸೇರಿದಂತೆ ವಿವಿಧ ಕೊಠಡಿಗಳ ಶುಚಿತ್ವ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವಧಿ ಮೀರಿದ ಔಷಧಿ ವಿತರಣೆ ಕುರಿತಂತೆ ಆಸ್ಪತ್ರೆಯ ವೈದ್ಯೆ ಡಾ. ಚೈತ್ರ ಅವರಿಂದ ಸೂಕ್ತ ಮಾಹಿತಿ ಸಂಗ್ರಹಿಸಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಬೇಳೂರು, ಇತ್ತೀಚೆಗೆ ಕೆಲವು ಕಿಡಿಗೇಡಿಗಳು ವೈದ್ಯರ ಅನುಪಸ್ಥಿತಿಯಲ್ಲಿ ಸಂಬಂಧ ಪಟ್ಟವರಿಗೆ ಸೂಕ್ತ ಮಾಹಿತಿ ನೀಡದೆ ಏಕಾಏಕಿ ಆಸ್ಪತ್ರೆಗೆ ನುಗ್ಗಿ ಸಿಬ್ಬಂದಿಗಳ ಸಮ್ಮುಖದಲ್ಲಿ ಆಸ್ಪತ್ರೆ ಹಾಗೂ ವೈದ್ಯರ ಕರ್ತವ್ಯ ಕುರಿತಂತೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಸ್ವತಹ ನಾನೇ ಇಲ್ಲಿನ ಗ್ರಾಮಸ್ಥರೊಂದಿಗೆ ವೈದ್ಯರ ಕಾರ್ಯಕ್ಷಮತೆ ಕುರಿತಂತೆ ಮಾಹಿತಿ ಸಂಗ್ರಹಿಸಿದ್ದೇನೆ. ಅಲ್ಪಾವಧಿಯಲ್ಲೆ ಅವರು ಜನಾನುರಾಗಿ ಆಗಿದ್ದಾರೆ ಎಂಬ ಅಂಶ ತಿಳಿದೆ. ರೋಗಿಗಳ ಹಿತಕ್ಕಾಗಿ ಇಸಿಜಿ, ರಕ್ತ ಪರೀಕ್ಷೆಗಾಗಿ ಆಧುನಿಕ ಯಂತ್ರೋಪಕರಣವನ್ನು ದಾನಿಗಳಿಂದ ಪಡೆದಿದ್ದಾರೆ ಎಂಬ ಅಂಶ ಬೆಳಕಿಗೆ ಬಂತು. ಇದು ಅವರು ಗ್ರಾಮದ ಜನರ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತಿದೆ. ಡಾ. ಚೈರ್ತ ಅವರು ನಿಟ್ಟೂರಿನಂತ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಒಂಟಿಯಾಗಿ ಕರ್ತವ್ಯ ನಿರ್ವಹಿಸಲು ಮನಸ್ಸು ಮಾಡಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಇಂತಹ ವೈದ್ಯರ ಸೇವೆಯು ಈ ಭಾಗದಲ್ಲಿ ನಿರಾತಂಕವಾಗಿ ಸಾಗಬೇಕಿದೆ. ಕೇಂದ್ರ ಸ್ಥಾನದಲ್ಲಿ ವೈದ್ಯರು ತಂಗಿ ಬಡಜನರ ಸೇವೆಗೆ ಸಹಕರಿಸಲಿ ಎಂದು ತಾವೇ ವೈದ್ಯರ ವಸತಿ ಗೃಹದ ದುರಸ್ತಿಗೆ ರೂ ನಾಲ್ಕು ಲಕ್ಷ ಅನುದಾನ ನೀಡಿ ಕಟ್ಟಡ ದುರಸ್ತಿ ಕಂಡಿದೆ. ಜನತೆ ಆಸ್ಪತ್ರೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಕಂಡುಬಂದಲ್ಲಿ ನನ್ನ ಗಮನಕ್ಕೆ ತನ್ನಿ. ಏಕಾಏಕಿ ಸರಕಾರಿ ಕಚೇರಿಗಳಿಗೆ ನುಗ್ಗಿ, ವ್ಯವಸ್ಥೆ ವಿರುದ್ದ ಅನಗತ್ಯ ಅಪಪ್ರಚಾರಕ್ಕೆ ಮುಂದಾಗುವುದು ಸರಿಯಲ್ಲ. ಇಂತಹ ಘಟನೆ ಮುಂದಿನ ದಿನಗಳಲ್ಲಿ ಪುನರಾವರ್ತನೆ ಆದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಷರಿಕೆ ನೀಡಿದರು.
ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡುವ ಅವಶ್ಯಕತೆ ಇಲ್ಲ. ವೈದ್ಯರನ್ನು ಬೇರೆಡೆಗೆ ವರ್ಗಾಹಿಸುವ ಪ್ರಶ್ನೆಯೇ ಬಾರದು. ಅವರಿಗೆ ಬೇಕಾದ ಸಹಕಾರ ನೀಡಲು ತಾವು ಬದ್ದ ಇರುವುದಾಗಿ ತಿಳಿಸಿದರು.
ಅವಧಿ ಮೀರಿದ ಔಷಧಿಗಳನ್ನು ಬೇರೆಡೆ ಸಂಗ್ರಹಿಸಿಟ್ಟು, ಪುಸ್ತಕದಲ್ಲಿ ಬರೆದು ದಾಖಲಿಸಿ. ವೈದ್ಯಕೀಯ ತ್ಯಾಜ್ಯ ಸಂಗ್ರಹಿಸುವ ಏಜೆನ್ಸಿಗೆ ಮಾಹಿತಿ ನೀಡಿ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಿ ಎಂದು ವೈದ್ಯರಿಗೆ ತಿಳಿಸಿದರು.
ಪತ್ರಕರ್ತರು ಸ್ವಲ್ಪ ಸತ್ಯಾಸತ್ಯತೆ ತಿಳಿದು ಬರೆಯಲಿ. ಏಕ ಪಕ್ಷೀಯವಾಗಿ ಬರೆದು ಗ್ರಾಮಸ್ಥರನ್ನು ದಾರಿ ತಪ್ಪಿಸಬೇಡಿ’ ಎಂದು ಕುಟುಕಿದರು.
ಕೂಡಲೇ ಆಸ್ಪತ್ರೆ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಾಗರ ವಿಭಾಗಾಧಿಕಾರಿ ಯತೀಂದ್ರ, ತಹಶೀಲ್ದಾರ್ ಚಂದ್ರಶೇಖರ್ ಇದ್ದರು
ಈ ವೇಳೆ ಸ್ಥಳೀಯರಾದ ಪುರುಷೋತ್ತಮ ಬೆಳ್ಳಕ್ಕ, ರವೀಶ್ ಹೆಗಡೆ ,ಮಂಜಪ್ಪ ಬರುವೆ, ಚಂದ್ರಪ್ಪ ಜೈನ್, ಮಂಜಪ್ಪ ದೋಸ್ತಿ, ನರಸಿಂಹ ಪೂಜಾರ್, ನಾಗೋಡಿ ವಿಶ್ವನಾಥ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸೇರಿದಂತೆ ಹಲವರು ಹಾಜರಿದ್ದರು.