ರಿಪ್ಪನ್ ಪೇಟೆ :ಅವೈಜ್ಞಾನಿಕ ಚರಂಡಿಯಿಂದ ಪಟ್ಟಣ ದ ನಾಲ್ಕು ರಸ್ತೆಯ ನೀರು,ಹೋಟೆಲ್ ನ ತ್ಯಾಜ್ಯಗಳು ಹೊಸನಗರ ರಸ್ತೆಯಲ್ಲಿರುವ ಚಿಪ್ಪಿಗರ ಕೆರೆಯ ಎದುರಿನ ರೈತರ ಜಮೀನಿಗೆ ಹೋಗುತ್ತಿದೆ.ಸ್ಥಳೀಯ ನಿವಾಸಿಗಳು ಹಾಗೂ ರೈತರು ಹಲವಾರು ಬಾರಿ ದೂರು ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಪರದಾಡುವಂತಾಗಿದೆ.
ಚರಂಡಿಯಿಂದ ಹರಿಯುತ್ತಿರುವ, ಮಳೆ ನೀರು,ಹೋಟೆಲ್ ಗಳ ತ್ಯಾಜ್ಯ, ಮಧ್ಯದ ಬಾಟಲಿಗಳು ಸಂಪೂರ್ಣವಾಗಿ ಕೃಷಿ ಭೂಮಿ ಸೇರುತ್ತಿವೆ.ರಿಪ್ಪನ್ ಪೇಟೆ ಹೊಸನಗರ ರಸ್ತೆಯ ಕೂಗಳತೆ ದೂರದಲ್ಲಿ ಇರುವ ಚಿಪ್ಪಿಗರ ಕೆರೆಯ ಸಮೀಪ ಈ ಚರಂಡಿಯ ನೀರು ಕೃಷಿ ಭೂಮಿಗೆ ಸೇರುತ್ತಿದ್ದು ಕೃಷಿ ಕೆಲಸಕ್ಕೆ ಅಯೋಗ್ಯವಾಗಿದೆ.ಚರಂಡಿಯ ನೀರಿನ ಕಾರಣದಿಂದ ಕೆಲವು ಬಾವಿಗಳು ಬಳಸಲು ಯೋಗ್ಯವಾಗಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.
ಈ ಬಗ್ಗೆ ಇದೇ ವಾರ್ಡ್ ನ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಆಸೀಫ಼್ ರವರನ್ನು ಸಂಪರ್ಕಿಸಿಸಿದಾಗ ಈ ಸಮಸ್ಯೆ ಬಗ್ಗೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ,ಚರಂಡಿ ಕಾಮಗಾರಿಯೇ ಅವೈಜ್ಞಾನಿಕವಾಗಿದೆ,ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಗ್ರಾಮ ಪಂಚಾಯತಿ ವತಿಯಿಂದ ಪ್ರಯತ್ನಿಸುತ್ತಿದ್ದೇವೆ ಎಂದರು.
ಇಲ್ಲಿನ ಜಮೀನು ಮಾಲೀಕರು ಈ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸದೇ ಐದಾರು ವರ್ಷಗಳೆ ಕಳೆದಿವೆ.ಈ ಕುರಿತು ಜಮೀನು ಮಾಲೀಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ದೂರು ಕೊಟ್ಟರು ಫಲಕಾರಿಯಾಗಲಿಲ್ಲ.
ಹೊಸನಗರ ಶಿವಮೊಗ್ಗ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಈ ಜಮೀನುಗಳಿದ್ದು ಇದೇ ರಸ್ತೆಯಲ್ಲಿ ಸಂಚರಿಸುವ ಜನಪ್ರತಿನಿಧಿಗಳು,ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ.
ಪ್ರತಿ ಬಾರಿ ಮಳೆಗಾಲದಲ್ಲಿ ಕೇವಲ ಚರಂಡಿಯ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವುದು ಹೊರತುಪಡಿಸಿದರೆ ಹೂಳೆತ್ತುವ ಕೆಲಸ ಆಗಿಲ್ಲ. ಹೀಗಾಗಿ ತ್ಯಾಜ್ಯ ಗಳಿಂದ ಚರಂಡಿ ಮುಚ್ಚಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಆದ್ದರಿಂದ ಹೂಳೆತ್ತಿ ಚರಂಡಿ ಸ್ವಚ್ಛಗೊಳಿಸಬೇಕು ಹಾಗೂ ರೈತರ ಜಮೀನಿಗೆ ಮಳೆ ನೀರು ಹೋಗಬಾರದು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ಈ ಸಂಧರ್ಭದಲ್ಲಿ ಮಾತನಾಡಿದ ಜಮೀನಿನ ಮಾಲೀಕರಾದ ಬಾಪುಖಾನ್ ಹಾಗೂ ಆರ್ ಎಸ್ ಶಂಶುದ್ದೀನ್
ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಶೋಷಿತ ರೈತರೆಲ್ಲಾ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವರದಿ: ರಾಮನಾಥ್
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..