ಉಡುಪಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಮೂಲದ ವಿಶಾಲ ಗಾಣಿಗ ಅವರ ಹತ್ಯೆ ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿದೆ ಪತಿಯೇ ಪತ್ನಿಯ ಕೊಲೆ ಸಂಚು ರೂಪಿಸಿದ ವಿಚಾರ ಬೆಳಕಿಗೆ ಬಂದಿದ್ದು, ಕೊಲೆಯ ಹಿಂದಿನ ಪಿನ್ ಟು ಪಿನ್ ಡೀಟೈಲ್ಸ್ ಇಲ್ಲಿದೆ.
ವಿಶಾಲ ಗಾಣಿಗ ತನ್ನ ಆರು ವರ್ಷದ ಮಗಳ ಜೊತೆಗೆ ಜೂನ್ ತಿಂಗಳಾಂತ್ಯದಲ್ಲಿ ದುಬೈನಿಂದ ತವರಿಗೆ ಬಂದಿದ್ದರು. ಪತಿ ರಾಮಕೃಷ್ಣ ದುಬೈನಲ್ಲಿ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ವಿಶಾಲ ಗಾಣಿಗ ಅವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಹೊಂದಿದ್ದರು.
ಜುಲೈ12ರಂದು ಮಗಳ ಬರ್ತ್ ಡೇ ಕಾರಣ ವಿಶಾಲ ಗಾಣಿಗ ತನ್ನ ತಂದೆ-ತಾಯಿಯ ಮನೆಯಾದ ಕುಂದಾಪುರದ ಗುಜ್ಜಾಡಿ ಮಗಳೊಂದಿಗೆ ಹೋಗಿದ್ದರು. ಆದರೆ ಬ್ಯಾಂಕ್ ಹೋಗುವ ಕಾರಣದಿಂದ ಮತ್ತೆ ಗುಜ್ಜಾಡಿಯಿಂದ ಬ್ರಹ್ಮಾವರಕ್ಕೆ ಬಂದಿದ್ದರು. ಆದರೆ ಬ್ಯಾಂಕ್ಗೆಂದು ಹೋದ ಅವರು, ಮನೆಯವರ ಸಂಪರ್ಕಕ್ಕೂ ಸಿಗದೇ ಇದ್ದಾಗ, ಅವರ ತಂದೆ ಮಗಳ ಬ್ರಹ್ಮವರದ ಫ್ಲ್ಯಾಟ್ಗೆ ಬಂದು ನೋಡಿದಾಗ ವಿಶಾಲ ಗಾಣಿಗ ಬೆಡ್ ರೂಂನಲ್ಲಿ ಕುತ್ತಿಗೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಸುಳಿವು ಬಿಡದೇ ಹತ್ಯೆ ಮಾಡಿದ ಹಂತಕರು
ಫ್ಲ್ಯಾಟ್ ನಲ್ಲಿ ಒಂಟಿ ಮಹಿಳೆಯ ಹತ್ಯೆ ಇಡೀ ಕರಾವಳಿಯಲ್ಲಿ ಸಂಚಲನ ಮೂಡಿಸಿತ್ತು. ಪ್ರಕರಣ ಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಮಂದಿಯನ್ನು ತೀವ್ರ ವಿಚಾರಣೆಯನ್ನೂ ಮಾಡಿದ್ದರು. ಆದರೆ ಕೊಲೆ ಆರೋಪಿಗಳು ಯಾವುದೇ ಸುಳಿವನ್ನು ಬಿಟ್ಟಿರಲಿಲ್ಲ. ವಿಶಾಲ ಗಾಣಿಗ ಕೇಬಲ್‌ನಲ್ಲಿ ಕತ್ತು ಬಿಗಿದ ಸ್ಥಿತಿಯಲ್ಲಿದ್ದರು. ಹಂತಕರು ಮೈ ಮೇಲಿದ್ದ ಚಿನ್ನವನ್ನು ದೋಚಿದ್ದರು. ಆದರೆ ಬೀರುನಲ್ಲಿದ್ದ ಚಿನ್ನಾಭರಣ ಹಾಗೆಯೇ ಇತ್ತು. ಮನೆಯ ಅಡುಗೆ ಕೋಣೆಯಲ್ಲಿ ಚಹಾದ ಲೋಟವೂ ಅರ್ಧ ತೊಳೆದ ಸ್ಥಿತಿಯಲ್ಲಿತ್ತು. ಹೀಗಾಗಿ ಇದು ಪರಿಚಯಸ್ಥರ ಕೆಲಸವೇ ಅಂದು ಕೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದರು.
ಪತ್ನಿ ಅಂತ್ಯಕ್ರಿಯೆ ವೇಳೆ ಅಮಾಯಕನಂತಿದ್ದ ಪತಿರಾಯ
ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ೪ ತಂಡಗಳಾಗಿ ಎಲ್ಲಾ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದರು. ಮೊದಲು ಚಿನ್ನ ಹಣದ ದರೋಡೆ ಉದ್ದೇಶದಿಂದ ಕೊಲೆ ಮಾಡಿದ್ದು ಅಂತ ಸಂಶಯ ಇದ್ದರೂ ನಂತರ, ತನಿಖೆಯ ವೇಳೆ ಇದು ಕೌಟುಂಬಿಕ ಕಾರಣಕ್ಕಾಗಿ ನಡೆದ ಹತ್ಯೆ ಅನ್ನುವ ಅನುಮಾನ ಬಂತು. ಉಡುಪಿ ಪೊಲೀಸರಿಗೆ ಸಿಕ್ಕಿದ ಬಲವಾದ ಸುಳಿವಿನ ಆಧಾರದಲ್ಲಿ, ಸುಪಾರಿ ಹಂತಕ ಸ್ವಾಮಿನಾಥ್ ಎಂಬುವವನ್ನು ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಬಂಧಿಸಲಾಯಿತು. ಆತನ ವಿಚಾರಣೆಯಲ್ಲಿ ಕೊಲೆಯ ಹಿಂದಿನ ಕಾಣದ ಕೈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಎರಡು ಲಕ್ಷ ರೂಪಾಯಿಗೆ ಕೊಲೆ ಸುಪಾರಿ
ವಿಶಾಲ ಗಾಣಿಗ ಪತಿ ರಾಮಕೃಷ್ಣ ಈ ಕೊಲೆಗೆ ಆರು ತಿಂಗಳ ಹಿಂದೆ ದುಬೈನಲ್ಲೇ ಕುಳಿತು ಪ್ಲಾನ್ ರೂಪಿಸಿದ್ದ. ಹಂತಕರಿಗೆ ಎರಡು ಲಕ್ಷಕ್ಕೂ ಅಧಿಕ ಹಣ ನೀಡಿ ಸುಪಾರಿ ಕೊಟ್ಟಿದ್ದಾನೆ ಎನ್ನಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಊರಿಗೆ ಬಂದಾಗ ವಿಶಾಲ ಅವರಿಗೆ ಇದು ನನ್ನ ಪ್ರೆಂಡ್ಸ್ ಅಂತ ಹಂತಕರನ್ನು ಪರಿಚಯ ಕೂಡ ಮಾಡಿದ್ದ. ಹೆಂಡತಿಯನ್ನು ವ್ಯವಸಿತವಾಗಿ ಮುಗಿಸಬೇಕೆಂದು ಪ್ಲ್ಯಾನ್ ಮಾಡಿದ ಪತಿ ರಾಮಕೃಷ್ಣ ಕೊಲೆಯ ದಿನ ಹೆಂಡತಿಗೆ ತನ್ನ ಪ್ಲ್ಯಾನ್ ಪ್ರಕಾರನೇ ಪ್ಲ್ಯಾಟ್ ನಲ್ಲಿ ಒಬ್ಬಳೇ ಇರುವಂತೆ ನೋಡಿಕೊಂಡಿದ್ದಾನೆ. ಈಗ ಫ್ಲ್ಯಾಟ್ ಗೆ ಸ್ನೇಹಿತರಿಬ್ಬರು ಬರ್ತಾರೆ. ಅವರಿಗೆ ಪಾರ್ಸೆಲ್ ಕೊಡು ಅಂತಾ ಹೇಳಿದ್ದಾನೆ. ಹೀಗೆ ರಾಮಕೃಷ್ಣ ಕಳುಹಿಸಿದ ಆ ಫ್ರೆಂಡ್ಸ್ ಗಳೇ ಉತ್ತರ ಭಾರತ ಮೂಲದ ಸುಪಾರಿ ಹಂತಕರು.
ಅಕ್ರಮ ಸಂಬಂಧಕ್ಕಾಗಿ ಹೆಂಡತಿಯ ಕೊಲೆ
ವಿಶಾಲ ಗಾಣಿಗಳ ಹತ್ಯೆಗೆ ಪತಿ ರಾಮಕೃಷ್ಣ ನಿಗೆ ಇದ್ದ ಅಕ್ರಮ ಸಂಬಂಧವೇ ಕಾರಣ ಅಂತಾ ಹೇಳಲಾಗಿದೆ. ರಾಮಕೃಷ್ಣನ ಅಕ್ರಮ ಸಂಬಂಧದಿಂದ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ಕೂಡ ನಡೀತಾ ಇತ್ತು. ಅಲ್ಲದೇ ಆಸ್ತಿ ವಿಚಾರದಲ್ಲೂ ಗಲಾಟೆ ಆಗುತ್ತಲೇ ಇತ್ತು. ಇದೇ ದ್ವೇಷದಿಂದ ರಾಮಕೃಷ್ಣ ಪತ್ನಿಯನ್ನು ಕೊಲೆ ಮಾಡಿಸಿದ್ದಾನೆ ಅಂತಾ ತಿಳಿದುಬಂದಿದೆ. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನೇತೃತ್ವದ ನಾಲ್ಕು ಪೊಲೀಸ್ ತಂಡ ಪ್ರಕರಣ ತನಿಖೆ ನಡೆಸಿದ್ದು, ಪತಿ ರಾಮಕೃಷ್ಣ ಮತ್ತು ಸುಪಾರಿ ಹಂತಕ ಸ್ವಾಮಿ ನಾಥ್ ಎಂಬುವವನನ್ನು ಬಂಧನ ಮಾಡಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..