ಹೊಸನಗರ: ಕನ್ನಡ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿ ತನ್ನದೇ ಆದ ಚಾಪು ಮೂಡಿಸಿ, ಕಣ್ಮರೆಯಾದ ಅಭಿಮಾನಿಗಳ ನೆಚ್ಚಿನ ಆಟೋ ರಾಜ ಶಂಕರ್ ನಾಗ್ ಅವರ ಹುಟ್ಟುಹಬ್ಬ ಇಂದು.
ಕನ್ನಡ ಚಿತ್ರ ರಂಗವನ್ನು ಹಾಲಿವುಡ್ ಸಿನಿಮಾ ಮಟ್ಟಿಗೆ ಬೆಳೆಸಬೇಕು ಎಂದು ಶಂಕರ್ ನಾಗ್ ಕನಸು ಕಂಡಿದ್ದರು. ಆದರೆ, ಅದು ನನಸಾಗುವ ಮೊದಲೇ ಕರಾಟೆ ಕಿಂಗ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಶಂಕರ್ ನಾಗ್ ನಮ್ಮೊಂದಿಗೆ ಇದ್ದಿದ್ದರೆ, ಇಂದು 67ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.
ಶಿವಮೊಗ್ಗ ಜಿಲ್ಲೆಯ ಹೊಸನಗರದ ಚೌಡಮ್ಮ ರಸ್ತೆಯ ಚೌಡಮ್ಮ ಆಟೋ ಚಾಲಕರ ಸಂಘದಿಂದ ಇಂದು ಕನ್ನಡದ ಮೇರು ನಟ ದಿವಂಗತ ಶಂಕರ್‌ನಾಗ್ ರವರ 67ನೇ ಹುಟ್ಟುಹಬ್ಬ ಹಾಗೂ 9ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವರ್ಣರಂಜಿತವಾಗಿ ಆಚರಿಸಿದರು.
ಹೊಸನಗರ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಶಂಕರ್‌ನಾಗ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿ ಹಾಗೂ ಕನ್ನಡ ಧ್ವಜವನ್ನು ಅನಾವರಣಗೊಳಿಸುವ ಮೂಲಕ ಹಾಗೂ ಆಟೋ ಚಾಲಕರ ಸಂಘದ ನಾಮಫಲಕ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಶಂಕರಣ್ಣ ಅಭಿನಯದ ಸಿನಿಮಾಗಳು ಹಾಗೂ ನಿರ್ದೇಶನ ಮಾಡಿದ ಚಿತ್ರಗಳು ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ತನ್ನ ಚಿತ್ರದ ಮೂಲಕ ಆಟೋ ಚಾಲಕರಿಗೆ ಒಂದು ಗೌರವ ತಂದು ಕೊಟ್ಟ ಏಕೈಕ ನಟ ಶಂಕರ್ ನಾಗ್. ಹೀಗಾಗಿ, ಅವರ ಹುಟ್ಟು, ಹಾಗೂ ನಿಧನದ ದಿನವನ್ನು ಅಭಿಮಾನಿಗಳು ಇಂದಿಗೂ ಸ್ಮರಿಸುತ್ತಾರೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಗೋವಿಂದರಾಜ ಅವರು ವಹಿಸಿದ್ದು, ಪಟ್ಟಣ ಪಂಚಾಯತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಇಲಿಯಾಸ್ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಕೃಷ್ಣವೇಣಿ, ಗಾಯತ್ರಿ ನಾಗರಾಜ್, ಬಜಾಜ್ ಗುರುರಾಜ್, ಹಾಲಗದ್ದೆ ಉಮೇಶ್, ಸುರೇಂದ್ರ ಕೋಟ್ಯಾನ್, ಕೆ.ಕೆ ಅಶ್ವಿನಿಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪ, ಗಣೇಶ್ ಹೆಗಡೆ, ಎಎಸ್ಐ ಸುರೇಶ್ ಇನ್ನಿತರರು ಪಾಲ್ಗೊಂಡಿದ್ದರು.
ವರದಿ : ಮದನ್ ಹೊಸನಗರ