ಅಮೃತ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ. ಅರಣ್ಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ:ನ್ಯಾಯಧೀಶ ಕೆ ರವಿಕುಮಾರ್.

ರಿಪ್ಪನ್ ಪೇಟೆ :  ಅರಣ್ಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಅರಣ್ಯ ಸಂರಕ್ಷಣೆ ಮಾಡದಿದ್ದರೆ ಪ್ರಾಕೃತಿಕ ವಿಕೋಪಗಳು.ಭೂಕುಸಿತಗಳು ಉಂಟಾಗುತ್ತವೆ  ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಅರಣ್ಯ ಸಂರಕ್ಷಣೆಗೆ ಮುಂದಾಗಬೇಕೆಂದು ಹೊಸನಗರ ತಾಲೂಕ್ ಪ್ರಧಾನ ವ್ಯವಹಾರ ನ್ಯಾಯಧೀಶ  ಮತ್ತು ಪ್ರಾಧಿಕಾರದ  ಸದಸ್ಯ  ಕೆ.ರವಿಕುಮಾರ್ ಹೇಳಿದರು.
ಅಮೃತ ಸರಕಾರಿ ಪದವಿಪೂರ್ವ ಕಾಲೇಜುನಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ, ಗ್ರಾಮಆಡಳಿತ ಅಮೃತ  ಹಾಗೂ ಅಮೃತ ಸರಕಾರಿ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಕಾನೂನು ಸೇವೆಗಳು ಹಾಗೂ ಮಕ್ಕಳ ಸಂರಕ್ಷಣೆ ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯಾಧೀಶ ಮತ್ತು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಕೆ.ರವಿಕುಮಾರ್     ನೆರೆವೇರಿಸಿ ಮಾತನಾಡಿ, ಭಾರತವು ವಿಶ್ವದಲ್ಲಿಯೇ ಅತ್ಯಂತ ಬೃಹತ್ ಸಂವಿಧಾನವನ್ನು ಹೊಂದಿದೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಕಾನೂನು ಹಾಗೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಹದಿಹರೆಯದ ವಯಸ್ಸಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಶಿಕ್ಷಣ ಹಾಗೂ ಉತ್ತಮ ವಿಷಯಗಳನ್ನು ಕಲಿಯಬೇಕು. ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ಮಾಹಿತಿಯನ್ನು ನೀಡುತಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ತಿಳಿಸಿದರು.
ಡಿವೈಎಸ್ಪಿ ಶಾಂತವೀರ ಮಾತನಾಡಿ ಕಾನೂನು ಅರಿವು ಪ್ರತಿಯೊಬ್ಬರಿಗೂ ಕೂಡ ಅವಶ್ಯಕವಾಗಿದ್ದು, ಪ್ರಸ್ತುತ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ಮೊಬೈಲ್ ಗಳನ್ನು ದೂರವಿಟ್ಟು, ಶಿಕ್ಷಣಕ್ಕೆ ಒತ್ತು ನೀಡಬೇಕು.ಹಾಗೆಯೇ ವಿದ್ಯಾರ್ಥಿ ಗಳು

ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳ ರಕ್ಷಣೆಗಾಗಿಯೇ ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ತಡೆ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಹಾಗೂ ಬಾಲ ಕಾರ್ಮಿಕ ನಿಷೇಧ ಮತ್ತು ನಿರ್ಮೂಲನೆ ಕಾಯ್ದೆಗಳಿದು, ಈ ಕಾಯ್ದೆಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿಯನ್ನು ತಿಳಿದುಕೊಂಡಿರಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಹಿರಿಯ ವಕೀಲ ಕೆ.ವೈ. ಷಣ್ಮುಖಪ್ಪ  ಬಾಲ್ಯ ವಿವಾಹದ ಬಗ್ಗೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ 18 ವರ್ಷದೋಳಗಿನ ಹೆಣ್ಣು ಮಕ್ಕಳನ್ನು ಬಾಲ್ಯವಿವಾಹ ಮಾಡುತ್ತಿದ್ದು, ಇದರಿಂದ ಮಕ್ಕಳ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮ ಬೀರುತ್ತಿದ್ದು, ಹಾಗೂ ಬಾಲ್ಯವಿವಾಹ ಮಾಡುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ತಿಳಿಸಿದರು. ಹಾಗೆಯೇ ಬಾಲ್ಯವಿವಾಹ ಮಾಡಿದ್ದಲ್ಲಿ ವಿವಾಹವಾದ ಪುರುಷ ಹಾಗೂ ಅವರ ತಂದೆ-ತಾಯಿ, ಬಾಲಕಿಯ ತಂದೆ-ತಾಯಿ, ಕಲ್ಯಾಣ ಮಂಟಪದ ಮಾಲೀಕರ ಮೇಲೆಯೂ ಸಹ ಪ್ರಕರಣ ದಾಖಲಿಸಬಹುದು. ಬಾಲ್ಯವಿವಾಹ ಮಾಡಿದ್ದಲ್ಲಿ ಕನಿಷ್ಟ ಸುಮಾರು 10 ವರ್ಷದವರೆಗೆ ಕಾರಾಗೃಹ ಶಿಕ್ಷೆ ನೀಡಬಹುದು ಎಂದು ತಿಳಿಸಿದರು.



 ಇನ್ನೋರ್ವ  ಸಂಪನ್ಮೂಲ ವ್ಯಕ್ತಿ ಸರಕಾರಿ ಸಹಾಯಕ ಅಭಿಯೋಜಕ ವಿಶ್ವನಾಥ್ ಪೋಕ್ಸೋ ಕಾಯ್ದೆಯ ಕುರಿತು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಂಡುಬರುತ್ತಿದ್ದು, ದೌರ್ಜನ್ಯವೆಸಗಿದವರ ಮೇಲೆ ಕಠಿಣ ಕಾನೂನು ಜಾರಿಯಲಿದೆ. 18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಲ್ಲಿ, ಸುಮಾರು 7-10 ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ ಮರಣ ದಂಡನೆ ಶಿಕ್ಷೆ ನೀಡಬಹುದು ಎಂದು ಕಾನೂನು ಜಾರಿಯಲ್ಲಿದ್ದು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದಂತಹ ಸಂದರ್ಭದಲ್ಲಿ 1098 ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಮೃತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹಮ್ಮದ್ ನಜಾಹತ್ ಉಲ್ಲಾ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ರಾಜು ಉಪಾಧ್ಯಕ್ಷರಾದ ಲಿಂಗರಾಜು ಬಂಡಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ. ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಟಿ.ಡಿ ಸೋಮಶೇಖರ್. ಸದಸ್ಯ ಕಟ್ಟೆ ಮಹೇಶ್. ಗ್ರಾಮ ಪಂಚಾಯಿತಿ ಸದಸ್ಯರುಗಳು  ಉಪಸ್ಥಿತರಿದ್ದರು.
 ವಿದ್ಯಾರ್ಥಿನಿ ಕುಮಾರಿ ಯಶಸ್ವಿನಿ ಹೆಚ್.ಎ. ಪ್ರಾರ್ಥಿಸಿ. ಉಪನ್ಯಾಸಕರಾದ ಶಂಕ್ರಪ್ಪ ಸ್ವಾಗತಿಸಿ. ಪ್ರಾನ್ಸಿಸ್ ಬೆಂಜಮಿನ್ ನಿರೂಪಿಸಿ ಸಬಾಸ್ಟಿನ್ ಮ್ಯಾಥ್ಯೂಸ್ ವಂದಿಸಿದರು.

Leave a Reply

Your email address will not be published. Required fields are marked *