ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಅರಸಾಳುವಿನಲ್ಲಿ ಇರುವ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ರೈಲು ನಿಲುಗಡೆ ಮಾಡಬೇಕೆಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅರಸಾಳುವಿನಲ್ಲಿ ರೈಲು ನಿಲುಗಡೆಯಿಂದ ರಿಪ್ಪನ್‌ಪೇಟೆ, ಅರಸಾಳು, ಬೆಳ್ಳೂರು, ಬಸವಾಪುರ, ಕಳಸೆ, ಬುಕ್ಕಿವರೆ, ಹುಂಚ, ಅಮೃತ, ಹೆದ್ದಾರಿಪುರ, ಹಾರೋಹಿತ್ತಲು, ಹೆದ್ದಾರಿಪುರ, ಕಲ್ಲೂರು, ಹೊಸನಗರ, ರಾಮಚಂದ್ರಪುರಮಠ, ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ಕುಂದಾಪುರ, ಬೈಂದೂರು, ಭಟ್ಕಳ, ಉಡುಪಿ, ಕೋಣಂದೂರು, ಆರಗ, ತೀರ್ಥಹಳ್ಳಿ, ಹೊಸಗಂಡಿ, ಸಿದ್ದಾಪುರ, ಆಗುಂಬೆ, ಹರತಾಳು, ಹೀಗೆ ಕೊಡಚಾದ್ರಿ, ಸಿಗಂದೂರು ಕವಲೆದುರ್ಗ ಕೋಟೆ, ಜೋಗ ಜಲಪಾತ ಇನ್ನಿತರ ಪ್ರಮುಖ ಪ್ರೇಕ್ಷಣಿಯ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ಹಾಗೂ ಉದ್ಯೋಗಕ್ಕಾಗಿ ಹೋಗುವ ವಿದ್ಯಾವಂತ ಯುವಜನಾಂಗಕ್ಕೆ ಕಡಿಮೆ ಖರ್ಚಿನಲ್ಲಿ ಓಡಾಡಲು ತುಂಬಾ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಮಾಕರ್ ಅರಸಾಳು ರೈಲ್ವೆ ಸ್ಟೇಷನ್‌ನಲ್ಲಿ ಕೆಲ ದಿನಗಳಿಂದ ಮೈಸೂರು-ತಾಳಗುಪ್ಪ, ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್ ರೈಲನ್ನು ನಿಲ್ಲಿಸದಿರುವುದು ಈ ಭಾಗದ ನೂರಾರು ಹಳ್ಳಿಯ ಸಾವಿರಾರು ಜನರು ತೊಂದರೆ ಅನುಭವಿ ಸುವಂತಾಗಿದೆ. ಈ ರೈಲು ನಿಲ್ದಾಣದಿಂದ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಶಿವಮೊಗ್ಗ, ಮೈಸೂರು, ಬೆಂಗಳೂರು ಮುಂತಾದ ದೂರದ ಊರುಗಳಿಗೆ ಪ್ರಯಾಣಿಸಲು ಅನುಕೂಲವಾಗಿದೆ. ಈಗ ಏಕಾಏಕಿ ಪ್ಯಾಸೆಂಜರ್ ರೈಲು ನಿಲುಗಡೆ ಮಾಡದಿರುವುದು ಪ್ರಯಾಣಿಕರಿಗೆ ತೊಂದರೆಯಾಗಿದೆ,ಕೋಟ್ಯಂತರ ರೂ ವೆಚ್ಚದಲ್ಲಿ ಹೊಸದಾಗಿ ರೈಲ್ವೆ ನಿಲ್ದಾಣ ಹಾಗೂ ಫ್ಲಾಟ್ ಫಾರಂಗಳು ನಿರ್ಮಾಣ ಮಾಡಲಾಗಿದ್ದು , ರೈಲು ನಿಲುಗಡೆಯಾಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ಡೈಮಂಡ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷರಾದ ಎಂ ನಾಗೇಂದ್ರ ಅರಸಾಳು ಗ್ರಾಮದ ಮಾಲ್ಗುಡಿ ಡೇಸ್ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹೊರ ಜಿಲ್ಲೆಗಳಿಂದ ಹೆಚ್ಚಿನ ಪ್ರವಾಸಿಗರು ಬಂದು- ಹೋಗುವ ಸ್ಥಳವಾಗಿದೆ. ಮಾಲ್ಗುಡಿ ಡೇಸ್ ಗೆ ಇದರದೇ ಆದ ಇತಿಹಾಸವಿದೆ. ದೇಶವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ಒಂದು ಸುಂದರ ಪ್ರವಾಸಿ ತಾಣ ಇಂತಹ ಸ್ಥಳದಲ್ಲಿ ಶಂಕರ್ ನಾಗ್ ರಂತಹ ಮೇರು ನಟರ ನೆನಪುಗಳು ಇದೆ.ಮಾಲ್ಗುಡಿ ಡೇಸ್ ಚಿತ್ರೀಕರಣಗೊಂಡ ಅರಸಾಳು ರೈಲು ನಿಲ್ದಾಣ ಮಾಲ್ಗುಡಿ ನಿಲ್ದಾಣವೆಂದೇ ಪ್ರಸಿದ್ಧವಾಗಿದೆ. ಬ್ರಿಟಿಷರ ಕಾಲದ ಈ ರೈಲು ನಿಲ್ದಾಣವನ್ನು 1.3 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಹಾಗೇ, ಈ ರೈಲು ನಿಲ್ದಾಣದ ಆವರಣದಲ್ಲಿ ಮಾಲ್ಗುಡಿ ಮ್ಯೂಸಿಯಂ ಕೂಡ ನಿರ್ಮಿಸಲಾಗಿದೆ. ಇದರಲ್ಲಿ ಶಂಕರ್ ನಾಗ್ ಪ್ರತಿಮೆಯನ್ನು ಕೂಡ ಇರಿಸಲಾಗಿದೆ.ಇಂತಹ ಇತಿಹಾಸ ಪ್ರಸಿದ್ದ ಜಾಗದಲ್ಲಿ ರೈಲು ನಿಲುಗಡೆಗೆ ಗ್ರಾಮಸ್ಥರಾದ ನಾವುಗಳು ಕೇಳುತ್ತಿರುವುದು ಇಂದಿನ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನೆಲ್ಸನ್, ಅನಿಲ್, ಅರುಣ್, ಡೆನ್ನಿಸ್, ಪಿಯೂಸ್ ರೊಡ್ರಿಗಸ್, ರೂಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.