ರೈತ ಮತ್ತು ಯೋಧ ದೇಶದ ಎರಡು ಕಣ್ಣುಗಳು: ಮಳಲಿ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಭಿಮತ

ರಿಪ್ಪನ್ ಪೇಟೆ :  ದೇಶಕ್ಕೆ ಅನ್ನ ಕೊಡುವ ರೈತ ಹಾಗೂ ದೇಶದ ಗಡಿಯನ್ನು ಕಾಯುವ ಯೋಧ ಇಬ್ಬರೂ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ. 

 ಪ್ರತಿವರ್ಷದಂತೆ ಗಣರಾಜ್ಯೋತ್ಸವದಂದು ರಿಪ್ಪನ್ ಪೇಟೆಯ ಮಾಜಿ ಸೈನಿಕರಾದ ವೀರಭದ್ರಪ್ಪ ಬೆಳವಿಗಿ ಅವರ ನಿವಾಸದಲ್ಲಿ ಇಷ್ಟಲಿಂಗಪೂಜೆಯನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು.

 ಭಾರತ ದೇಶ ಈ ಹಿಂದಿನಿಂದಲೂ ಯೋಗಿಗಳನ್ನು ಗೌರವಿಸಿಕೊಂಡು ಬಂದಿದೆ. ಅಂತೆಯೇ ಯೋಗಿಗಳ ಜೊತೆಗೆ ಯೋಧರನ್ನು ಗೌರವಿಸುವ ಅವಶ್ಯಕತೆ ಈ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಆ ಕಾರಣದಿಂದಲೇ ಪ್ರತಿವರ್ಷ ಗಣರಾಜ್ಯೋತ್ಸವದಂದು ಮಾಜಿ ಹವಲ್ದಾರ್ ವೀರಭದ್ರಪ್ಪನವರ ಮನೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಿಕೊಂಡು ಬಂದಿದ್ದೇವೆ ಎಂದು ಶ್ರೀಗಳು ತಿಳಿಸಿದರು. 

ಗಣರಾಜ್ಯೋತ್ಸವದಂದು ದೇಶದ ಸೇನೆಯ ಶಕ್ತಿಯನ್ನು ಜಾಗತಿಕ ಲೋಕಕ್ಕೆ ಪ್ರದರ್ಶಿಸುವ ಸಂದರ್ಭವಾಗಿದೆ.   ಸ್ವತಂತ್ರ ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಇಲ್ಲಿನ ಸಂವಿಧಾನವು ಸರ್ವರಿಗೂ ಸಮಾನ ಅವಕಾಶವನ್ನು ನೀಡಿದ್ದು, ಅಂತಹ ಸಂವಿಧಾನ ಜಾರಿಯಾದ     ಗಣರಾಜ್ಯೋತ್ಸವವು ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಎಂದು ಶ್ರೀಗಳು ಬಣ್ಣಿಸಿದರು.                                                     

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ವೀರಭದ್ರಪ್ಪ ಅನ್ನಪೂರ್ಣ ದಂಪತಿಗಳನ್ನು ಆಶೀರ್ವದಿಸಿದರು. ಹೊಸನಗರ ತಾಲೂಕು ಬಿಜೆಪಿ ಉಪಾಧ್ಯಕ್ಷ ಕಲ್ಲೂರು ನಾಗೇಂದ್ರಪ್ಪ, ಗ್ರಾಮಪಂಚಾಯಿತಿ ಸದಸ್ಯ ಪಿ.ರಮೆಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *