Headlines

ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ತೀರ್ಥಹಳ್ಳಿ ಗೌರವ ಉಳಿಸಿ : ಕಿಮ್ಮನೆ ರತ್ನಾಕರ್

ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ಸಿಕ್ಕಿದಾಗ ನಮ್ಮ ಕ್ಷೇತ್ರಕ್ಕೆ ಒಳ್ಳೆಯ ಹುದ್ದೆ ಸಿಕ್ಕಿದೆ ಎಂದು ಖುಷಿಪಟ್ಟಿದ್ದೆ. ನಾನೇ ಸನ್ಮಾನ ಮಾಡಿದ್ದೆ. ತೀರ್ಥಹಳ್ಳಿ ಪ್ರಜ್ಞಾವಂತ ಮತದಾರರು ಇರುವ ಕ್ಷೇತ್ರ. ಶಾಂತವೇರಿ ಗೋಪಾಲಗೌಡರ ಹೆಸರು ಹೇಳದೆ ಅಧಿವೇಶನ ಸಹ ನಡೆಯುವುದಿಲ್ಲ.

ಆದರೆ, ಇಂದು ಜ್ಞಾನೇಂದ್ರ ನಮ್ಮ ಕ್ಷೇತ್ರಕ್ಕೆ ಕಳಂಕ ತರುತ್ತಿದ್ದಾರೆ. ರಾಜ್ಯದ ಜನರು ಅವರಿಗೂ, ತೀರ್ಥಹಳ್ಳಿ ಕ್ಷೇತ್ರಕ್ಕೂ ಬೈಯುತ್ತಿದ್ದಾರೆ. ಹೀಗಾಗಿ ಆರಗ ಜ್ಞಾನೇಂದ್ರ ರಾಜೀನಾಮೆ ಕೊಟ್ಟು ತೀರ್ಥಹಳ್ಳಿ ಗೌರವವನ್ನು ಉಳಿಸಬೇಕು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಭಾಗವಾಗಿರುವ ಸಚಿವರು, ಶಾಸಕರು, ಮುಖಂಡರು ಶಾಂತಿ- ಸುವ್ಯವಸ್ಥೆ ಕಾಪಾಡಬೇಕು. ಆಡಳಿತ ಪಕ್ಷದವರೇ ಕೋಮು ಗಲಭೆ ಸೃಷ್ಟಿಸುತ್ತಿರುವುದು ದೇಶದ ದುರಂತ. ಓರ್ವ ಗೃಹಸಚಿವರಾಗಿ ಕೋಮು ಭಾವನೆ ಕೆರಳಿಸುವಂತೆ ಹೇಳಿಕೆ ಕೊಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸಚಿವರೇ ಹೀಗೆ ಮಾತಾಡಿದರೆ ಹೇಗೆ‌? ಇವರ ವಿರುದ್ದವೇ ಕೇಸ್ ದಾಖಲಿಸಬೇಕು. ಸಿಎಂ ಇವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಓರ್ವ ಗೃಹ ಸಚಿವರಾಗಿ ಚುಚ್ಚಿ ಚುಚ್ಚಿ ಕೊಲೆ ಮಾಡುತ್ತಾರೆ ಎನ್ನುತ್ತಾರೆ‌. ಚಂದ್ರು ಉರ್ದು ಮಾತಾಡಲಿಲ್ಲ ಎಂದು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಮುಗಿಬೀಳಲಿ ಎನ್ನುವ ಉದ್ದೇಶವಿದೆ. ಗೃಹಸಚಿವರ ವಿರುದ್ಧವೇ ದೇಶದ್ರೋಹದ ಕೇಸ್ ದಾಖಲಿಸಬೇಕು. ಆರಗ ರಾಜೀನಾಮೆಗೆ ಒತ್ತಾಯಿಸಿ, ನಾಳೆ ಪ್ರತಿಭಟನೆ ಮಾಡುತ್ತೇವೆ ಎಂದು ಕಿಮ್ಮನೆ ರತ್ನಾಕರ ಹೇಳಿದರು.

Leave a Reply

Your email address will not be published. Required fields are marked *