Headlines

ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ : ಯುವ ಕಾಂಗ್ರೆಸ್ ವತಿಯಿಂದ ಗೃಹ ಸಚಿವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು :

ತೀರ್ಥಹಳ್ಳಿ : ರಾಜ್ಯ ಸರ್ಕಾರದ ಗೃಹಸಚಿವ ಆರಗ ಜ್ಞಾನೇಂದ್ರ ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿದ್ದಾರೆ ಈ ಕಾರಣಕ್ಕೆ ಆದಷ್ಟು ಬೇಗ ರಾಜೀನಾಮೆ ಕೊಟ್ಟು ತೀರ್ಥಹಳ್ಳಿಯ ಗೌರವ ಕಾಪಾಡಿ ಎಂದು ಇಂದು ತೀರ್ಥಹಳ್ಳಿಯ ತಾಲೂಕು ಕಛೇರಿ ಮುಂಭಾಗ ನೆಡದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಕಿಮ್ಮನೆ ರತ್ನಾಕರ್ ವಾಗ್ದಾಳಿ ನೆಡೆಸಿದರು. 

ಅವರೊಬ್ಬ ರಾಜ್ಯದ ಗೃಹಸಚಿವ, ರಾಜ್ಯದಲ್ಲಿ  ಶಾಂತಿ ಕಾಪಾಡುವಂತೆ ಮಾಡುವ ಕೆಲಸ ಅವರದ್ದು  ಯಾವುದೇ ಕೇಸ್ ಗೆ ಸಂಬಂಧಪಟ್ಟ ವಿಷಯವಾದರೂ ತನಿಖೆ ನೆಡೆಯುವದರೊಳಗೆ ಹೇಳಿಕೆ ನೀಡಬಾರದು. ಆದರೆ ಗೃಹಸಚಿವರು ವಿಷಯ ತಿಳಿದುಕೊಳ್ಳದೆ ಕೋಮುಗಲಭೆ ಆಗುವಂತಹ ಹೇಳಿಕೆ ನೀಡಿದ್ದಾರೆ.

ತೀರ್ಥಹಳ್ಳಿಯ ನಂದಿತಾ ಪ್ರಕರಣದಲ್ಲೂ ಇದೆ ರೀತಿಯ ಹೇಳಿಕೆಯನ್ನು ಆರಗ ನೀಡಿದ್ದರು.ನಂದಿತಾಳನ್ನು ಕರೆದುಕೊಂಡು ಹೋಗಿದ್ದು ಯಾರು ಸಹ ನೋಡಿಲ್ಲ, ಆದರೂ ಕರೆದುಕೊಂಡು ಹೋದವರು ಉರ್ದು ಮಾತನಾಡುತ್ತಿದ್ದರು ಎಂದು ಆಗ ಆರಗ ಹೇಳಿದ್ದರು.
ಭಾಷೆಯ ವಿಷಯವನ್ನು ಮಾತನಾಡಿ ಈ ರೀತಿಯ ಕೋಮುಗಲಭೆ ಆಗುವಂತಹ ಹೇಳಿಕೆ ನೀಡುತ್ತಿದ್ದಾರೆ ಹಾಗಾಗಿ ಈ ಕೊಡಲೇ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಇನ್ನೊಂದು ಬಾರಿ ಒಂದು ತಿಂಗಳಲ್ಲಿ ತಾಲೂಕಿನ 10, 000 ಜನರನ್ನು ಸೇರಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನೊಣಬೂರು ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷನ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕಾರಿಗೆ ಹೋದವರ ಮೇಲೆ 302 ಕೇಸ್ ಹಾಕಲಾಗಿದೆ. 302 ಕೇಸ್ ಅಂದ್ರೆ ಏನು ಅಂತಾನೆ ಜ್ಞಾನೇಂದ್ರರಿಗೆ ಗೊತ್ತಿಲ್ಲ. ಪೊಲೀಸರು ಸಹ ಅವರ ಮಾತನ್ನೇ ಕೇಳುತ್ತಿದ್ದಾರೆ. ಪೊಲೀಸರು ಹೀಗೆ ಅವರ ಮಾತನ್ನು ಕೇಳುತ್ತ ತಪ್ಪು ಮಾಡುತ್ತಿದ್ದರೆ ಪೊಲೀಸರಿಗೆ ನಾವೇನು ಎಂದು ತೋರಿಸಬೇಕಾಗುತ್ತದೆ ಎಂದು ಗುಡುಗಿದರು.

ಆರಗ ಜ್ಞಾನೇಂದ್ರ ಹಾಗೂ ಸಿ ಟಿ ರವಿ ಇವರುಗಳು  ಅಪರಾಧಿಕ ಒಳಸಂಚು ನಡೆಸಿ ನೀಡಿದ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ, ಭಾಷಾಭಿಮಾನಿಗಳಿಗೆ ನೋವುಂಟು ಮಾಡುವ ಮೂಲಕ ಅವರು ಸಾಮಾಜಿಕ ಶಾಂತಿ ಕದಡಲು, ತಮ್ಮ ಲಾಭಕ್ಕಾಗಿ ಈ ರೀತಿ ಸಮಾಜದ ಶಾಂತಿ, ಸೌಹಾರ್ದತೆಗೆ ಭಂಗ ತರುವ ಹೇಳಿಕೆ ನೀಡಿರುವುದು ಕಂಡುಬರುತ್ತದೆ. ಅವರ ಕೃತ್ಯಗಳು ಐಪಿಸಿ ಸೆಕ್ಷನ್ 120 – A (criminal conspiracy), 120 – B, 124 – A (Sedition), 153 – A (Promoting enmity between different groups on grounds of religion, race, place of birth, residence language ) ಅಡಿಯಲ್ಲಿ ಅಪರಾಧವಾಗಿರುತ್ತದೆ. ಆದ್ದರಿಂದ ಆರಗ ಜ್ಞಾನೇಂದ್ರ ಹಾಗೂ ಸಿ ಟಿ ರವಿ ಅವರ ವಿರುದ್ಧ ಕೋಮು ಭಾವನೆ ಕೆರಳಿಸುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ ಕೋಮುಗಲಭೆಗಳಿಗೆ ಉತ್ತೇಜನ ನೀಡಿ ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ಜೀವಕ್ಕೆ ಹಾನಿ ಮಾಡಲು ಪ್ರಚೋದನೆ ನೀಡಿದ ಆರೋಪದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಡಾ. ಶ್ರೀಪಾದ್ ಅವರಿಗೆ  ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಕೆಪಿಸಿಸಿ ಸದಸ್ಯರಾದ ಜಿ ಎಸ್ ನಾರಾಯಣರಾವ್,ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರಾದ ಆದರ್ಶ ಹುಂಚದಕಟ್ಟೆ,ಮೂಡುಬ ರಾಘವೇಂದ್ರ, ಅಮ್ರಪಾಲಿ ಸುರೇಶ್, ,  ಪಟ್ಟಣ ಪಂಚಾಯತ್ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ  , ಹಾಗೂ ಎಲ್ಲಾ ಸದಸ್ಯರು ಪ್ರತಿಭಟನೆಯಲ್ಲಿ  ಭಾಗಿಯಾಗಿದ್ದರು.



ಯುವ ಕಾಂಗ್ರೆಸ್ ವತಿಯಿಂದ ಗೃಹ ಸಚಿವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು :


ಶಿವಮೊಗ್ಗ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಿವೈಎಸ್ಪಿ ರವರಿಗೆ ದೂರು ದಾಖಲಿಸಿದ್ದಾರೆ.


ದೂರು ನೀಡಲು ಕಾರಣವೇನು?
ಬೆಂಗಳೂರಿನಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೋಮು ಗಲಭೆ ಸೃಷ್ಟಿಸುವ ಹೇಳಿಕೆ ನೀಡಿ, ನಂತರ ಹೇಳಿಕೆ ಬದಲಿಸಿದ್ದರು. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾರಣವಾಗುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿ ದೂರು  ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಧಾರ್ಮಿಕ ಭಾವನೆ ಕೆರಳಿಸುವುದು ಮತ್ತು ಸಾಮಾಜಿಕ ಶಾಂತಿ ಹದಗೆಡಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಶತ್ರುತ್ವ ಬೆಳೆಯಲು ಕಾರಣವಾಗಿ, ಅದರ ಲಾಭ ಪಡೆಯುವ ಉದ್ದೇಶವನ್ನು ಅವರು ಹೊಂದಿದ್ದಾರೆ. ರಾಜ್ಯದಲ್ಲಿ ಶಾಂತಿ ಕದಡಲು ಮುಂದಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 295ಎ, 298, 505ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರಾದ ಆದರ್ಶ್ ಹುಂಚದಕಟ್ಟೆ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಪೂರ್ಣೇಶ್ ಕೆಳಕೆರೆ ಯುವ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷರಾದ ಅಮರನಾಥ ,ಯುವ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾದ ತಿಳಿ ರಾಘವೇಂದ್ರ, ಸುಬ್ರಹ್ಮಣ್ಯ ವಿಟ್ಟಲ್ ನಗರ ಹಾಗೂ ಇನ್ನಿತರರು ಉಪಸ್ಥಿತರಿದ್ದರು 

Leave a Reply

Your email address will not be published. Required fields are marked *