ನೀರಿನಲ್ಲಿ ಕೊಚ್ಚಿ ಹೋಗುತಿದ್ದ ಯುವಕನನ್ನು ಉಳಿಸಿದ ಪೊಲೀಸ್ ಸಿಬ್ಬಂದಿ
ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಸಾಹಸದಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ಜೀವ ಉಳಿದ ಘಟನೆ ಭಾನುವಾರ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ನಗರದ ಕೊಮ್ಮನಾಳು ಗ್ರಾಮದಲ್ಲಿ ನಡೆದಿದೆ.
ಕೊಮ್ಮನಾಳು ಸಮೀಪದ ಖಾಸಗಿ ಶಾಲೆಯೊಂದರ ಬಳಿ ಭಾರೀ ಮಳೆಯಿಂದ ರಸ್ತೆ ಮೇಲೆಯೇ ನೀರು ಹರಿಯುತ್ತಿತ್ತು.
ಗುಡ್ಡದ ಮೇಲೆ ಬಿದ್ದ ಮಳೆಯ ನೀರು ರಸ್ತೆ ಮೇಲೆ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗಿತ್ತು. ಈ ವೇಳೆ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಪ್ರದೀಪ್ ತಮ್ಮ ಬೈಕ್ನಲ್ಲಿ ನ್ಯಾಮತಿಯ ದೊಡ್ಡೆತ್ತಿನಳ್ಳಿಯ ಕಡೆಗೆ ಹೊರಟಿದ್ದರು. ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನ ರಭಸ ಅರಿಯದ ಅವರು ಅದೇ ರೋಡಿನಲ್ಲಿ ಮುಂದಕ್ಕೆ ಹೋಗಿದ್ದರು. ಪರಿಣಾಮ ಹರಿಯುವ ನೀರಿನ ರಭಸದಲ್ಲಿ ಅವರು ಕೊಚ್ಚಿಕೊಂಡು ರಸ್ತೆಯ ಪಕ್ಕದಲ್ಲಿದ್ದ ಪ್ಲಾಂಟ್ನೊಳಗೆ ಹೋಗಿಬಿದ್ದದ್ದರು.
ಈ ದೃಶ್ಯವನ್ನು ಗಮನಿಸಿದ ಓರ್ವರು 112 ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆಗ ರಾತ್ರಿ11:30ಆಗಿತ್ತು. ಕರೆ ಸ್ವೀಕರಿಸಿದ ರೆಸ್ಪಾಂಡೆಂಟ್ ರಂಗನಾಥ್ ಹಾಗೂ ಡ್ರೈವರ್ ಪ್ರಸನ್ನ ಕುವೆಂಪು ನಗರದಲ್ಲಿದ್ದರು. ಐದು ನಿಮಿಷದಲ್ಲಿ ಯುವಕ ಬಿದ್ದಿದ್ದ ಸ್ಥಳಕ್ಕೆ ಬಂದಿದ್ದಾರೆ. ಆಗ ಅಲ್ಲೊಬ್ಬರು ವೃದ್ಧರು ನಿಂತುಕೊಂಡು ವ್ಯಕ್ತಿಯೊಬ್ಬನ ರಕ್ಷಣೆಗೆ ಮುಂದಾಗಿದ್ದು ಕಂಡಿದೆ. ತಕ್ಷಣವೇ ವಾಹನದಿಂದ ಇಳಿದ ಸಿಬ್ಬಂದಿ ಖುದ್ದು ರಕ್ಷಣಾ ಕಾರ್ಯಾಚರಣೆಗೆ ಇಳಿದರು.
ಕೊಚ್ಚಿ ಹೋದ ಬೈಕ್ :
ಈ ನಡುವೆ ಪ್ರದೀಪ್ ನೀರಿನಲ್ಲಿ ಕೊಚ್ಚಿ ಹೋಗುವ ಸಂದರ್ಭದಲ್ಲಿ ಅವರ ಬೈಕ್ ಕೂಡ ನೀರಿನಲ್ಲಿ ಕೊಚ್ಚಿ ಹೋಗಿತ್ತು. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಆದಷ್ಟು ಬೈಕ್ನ್ನು ಹಿಡಿದುಕೊಳ್ಳುವ ಪ್ರ್ರಯತ್ನ ಮಾಡಿದ್ದರು. ಸಾಧ್ಯವಾಗದಿದ್ದಾಗ ಪ್ರಯತ್ನ ಕೈ ಚೆಲ್ಲಿದ್ದರು. ಮೂರು ಅಡಿ ನೀರಿದ್ದರಿಂದ ರಾತ್ರಿ ಬೈಕ್ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ 112 ವಿಭಾಗದ ಸಿಬ್ಬಂದಿ ನೀರು ಹರಿದ ಪ್ರದೇಶದಲ್ಲಿ ಬೈಕ್ಗಾಗಿ ಹುಡುಕಾಟ ನಡೆಸಿದ್ದಾರೆ. ಘಟನೆ ನಡೆದ ಜಾಗದಿಂದ ಸುಮಾರು ದೂರ ಕೊಚ್ಚಿ ಹೋಗಿದ್ದು ಮರವೊಂದರ ಬುಡದಲ್ಲಿ ಪತ್ತೆಯಾಗಿದೆ.