ಸಕ್ರೆಬೈಲು ಆನೆ ಬಿಡಾರದ ತುಂಗಾ ಹಿನ್ನೀರಿನಲ್ಲಿ ಜಂಗಲ್ ರೇಸಾರ್ಟ್ ವತಿಯಿಂದ ಇಂದು ಬೋಟ್ ವ್ಯವಸ್ಥೆಗೆ ಚಾಲನೆ ನೀಡಲಾಯಿತು.
ಸಂಸದ ಬಿ.ವೈ.ರಾಘವೇಂದ್ರ ರವರು ನೂತನ ಬೋಟ್ ಗೆ ಚಾಲನೆ ನೀಡಿದರು. ನಂತರ ಸಂಸದರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಂಗಲ್ ರೇಸಾರ್ಟ್ ನ ನಿರ್ದೆಶಕ ರಾಜೇಶ್ ಕಾಮತ್ ಸೇರಿದಂತೆ ಇತರರು ಬೋಟ್ ನಲ್ಲಿ ವಿಹರಿಸಿದರು.
ನಂತರ ಮಾತನಾಡಿದ ಸಂಸದರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಬೋಟಿಂಗ್ ವ್ಯವಸ್ಥೆ ಉಪಯುಕ್ತವಾಗಲಿದೆ ಎಂದರು.
ಸಕ್ರೆಬೈಲು ಆನೆಬಿಡಾರದಲ್ಲಿ ಇನ್ಮುಂದೆ ಪ್ರವಾಸಿಗರು ಆನೆಗಳನ್ನು ವೀಕ್ಷಿಸುವುದು ಮಾತ್ರವಲ್ಲ, ತುಂಗಾ ಹಿನ್ನೀರಿನಲ್ಲಿ ಬೋಟಿಂಗ್ ಸ್ಪೋರ್ಟ್ಸ್ ಕೂಡ ಆಡಬಹುದು.
ಏನೇನು ಲಭ್ಯ?
ಸಕ್ರೆಬೈಲಿನ ಆನೆಗಳ ಬಿಡಾರದ ಜೊತೆಗೆ ಇಲ್ಲಿನ ಹಿನ್ನೀರಿನ ವಿಹಂಗಮ ನೋಟವನ್ನು ಆಸ್ವಾದಿಸುವುದು ಮಾತ್ರವಲ್ಲ ಜಲಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ. ಇಲ್ಲಿನ ಸುಂದರ ವಾತಾವರಣ ಮನಮೋಹಕವಾಗಿದ್ದು, ಪ್ರವಾಸಿಗರನ್ನು ಸಂತಸಪಡಿಸಲಿದೆ. ಇಲ್ಲಿನ ಶುದ್ಧ ಗಾಳಿ, ನೀರು, ಅಷ್ಟಾಗಿ ಇರದ ಜನಜಂಗುಳಿ ವಾತಾವರಣ ಇದೆಲ್ಲವೂ ಪ್ರವಾಸಿಗರನ್ನು ಆಕರ್ಷಿಸಲಿದೆ.
ಹೊಸದಾಗಿ ಆರಂಭಿಸಲಾಗುತ್ತಿರುವ ಈ ಬೋಟಿಂಗ್ ಸ್ಪೋರ್ಟ್ಸ್ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿರಲಿದೆ. ಮುಂದಿನ ದಿನಗಳಲ್ಲಿ ಸ್ವಯಂ ಹುಟ್ಟು ಹಾಕುತ್ತಾ ಬೋಟಿಂಗ್ ಮಾಡುವುದು, ರ‌್ಯಾಫ್ಟಿಂಗ್, ಪೆಡಲಿಂಗ್ ಕೂಡ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಜಂಗಲ್ ರೆಸಾರ್ಟ್ ನಲ್ಲಿ ತಂಗುವವರು ಮಾತ್ರವಲ್ಲದೇ ಸಾರ್ವಜನಿಕರಿಗೂ ಅವಕಾಶ ಮುಕ್ತವಾಗಿದ್ದು, ಪ್ರವಾಸಿಗರು ಕುಟುಂಬದ ಸದಸ್ಯರೊಂದಿಗೆ ಈ ಜಲಕ್ರೀಡೆಯ ಸವಿಯನ್ನು ಸವಿಯಬಹುದಾಗಿದೆ.