ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ಬಾರಿಯ ಶಿವಮೊಗ್ಗ ಜಿಲ್ಲಾ ಮಟ್ಟದ “ಸ್ವಚ್ಚತಾ ವಿದ್ಯಾಲಯ” ಪ್ರಶಸ್ತಿ ಲಭಿಸಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ರವರು ತಮ್ಮ ಕಛೇರಿಯಲ್ಲಿ ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ದೇವೆಂದ್ರಪ್ಪರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂಧರ್ಭದಲ್ಲಿ ಬಿದರಹಳ್ಳಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಪದ್ಮರಾಜ್, ಶಾಲೆಯ ಶಿಕ್ಷಕರಾದ ಮಧುಕುಮಾರ್,ದಿನೇಶ್ ರವರು ಉಪಸ್ಥಿತರಿದ್ದರು.
ಬಿದರಹಳ್ಳಿ ಶಾಲೆಯ ಹಿನ್ನೋಟ :
ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರೆಲ್ಲ ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿ ಶಾಲೆಗೆ ಒಮ್ಮೆ ಭೇಟಿ ನೀಡಬೇಕು. ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಹುದಹುದು ಎನ್ನದಿದ್ದರೆ ಹೇಳಿ!
ಮಲೆನಾಡ ಗಾಂಧಿ ಎಚ್.ಜಿ. ಗೋವಿಂದೇಗೌಡ ಹೆಸರಿನ ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಹಾಗೂ ಇನ್ನಿತರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆಯುವ ಮೂಲಕ ಮಲೆನಾಡಿನ ಹಳ್ಳಿಯೊಂದು ರಾಜ್ಯದಲ್ಲಿ ಗುರುತಿಸಿಕೊಂಡಿದೆ.
ಶಿಕ್ಷಕರ ನಿಸ್ವಾರ್ಥ ಸೇವೆ, ಶಿಕ್ಷಣ ಪ್ರೇಮ, ಊರವರ ಸಹಾಯ-ಸಹಕಾರ ಸೇರಿದರೆ ಸರ್ಕಾರಿ ಶಾಲೆಯೊಂದು ಹೇಗೆ ಅಭಿವೃದ್ಧಿ ಪಥದಲ್ಲಿ ಸಾಗಬಹುದು ಎಂಬುದಕ್ಕೆ ಉತ್ತರವಾಗಿ ನಿಲ್ಲುತ್ತದೆ ಬಿದರಹಳ್ಳಿಯ ಈ ಸರ್ಕಾರಿ ಶಾಲೆ.
ಶಾಲೆಯ ಮುಂದಿನ ಕೈದೋಟದಲ್ಲಿ ಹಲವು ಜಾತಿಗಳ ಬಣ್ಣ ಬಣ್ಣದ ಹೂಗಳು. ತೋಟದ ರಕ್ಷಣೆಗಾಗಿಯೇ ನಿರ್ಮಿಸಿದ ಹೂಬಳ್ಳಿಯ ಬೇಲಿ. ಉದ್ಯಾನದಲ್ಲಿ ಸಿಮೆಂಟ್‌ನಿಂದ ತಯಾರಾದ ಬಗೆಬಗೆಯ ಪ್ರಾಣಿಗಳು, ಜಿಂಕೆ, ಮೊಲ, ನವಿಲು, ಸಾಹಿತಿಗಳ ಕಲಾಕೃತಿಗಳು, ವಿಶಾಲವಾದ ಆಟದ ಮೈದಾನ. ಶಾಲೆಯ ಆವರಣದ ಸುತ್ತ ಹಚ್ಚು ಹಸಿರಿನಿಂದ ಕಂಗೊಳಿಸುವ ಸುಮಾರು ಬಗೆಬಗೆಯ ಗಿಡಗಳು. ಶಾಲಾ ಮುಂಭಾಗದ ಕಟ್ಟಡಕ್ಕೆ ಬರೆಯಲಾದ ವಿವಿಧ ಮಾಹಿತಿ ಫಲಕಗಳು. ಮಧ್ಯದಲ್ಲಿ ಸುಂದರ ರಂಗಸಜ್ಜಿಕೆ. ನೋಡಲೆರಡು ಕಣ್ಣು ಸಾಲದು. ಮಕ್ಕಳಿಗೆ ಶಾಲೆಗೆ ಬರುವುದೆಂದರೆ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಅನುಭವ.
ಮುಖ್ಯೋಪಾಧ್ಯಾಯರಾಗಿ 2011ರಲ್ಲಿ ಬಂದ ಬಿ ದೇವೆಂದ್ರಪ್ಪ ಅವರ ದಕ್ಷ ಆಡಳಿತ ಇವತ್ತು ಶಾಲೆಯನ್ನು ರಾಜ್ಯಮಟ್ಟದಲ್ಲಿ ಮೊದಲು ನಿಲ್ಲಿಸುವಂತೆ ಮಾಡಿದೆ.ಇವರ ಆಶಯಗಳಿಗೆ ಸಹಕರಿಸಿದ ಸಹ ಶಿಕ್ಷಕರುಗಳಾದ ಮಧುಕರ್,ದಿನೇಶ್,ಆಯಿಷಾ ಹಾಗೂ ಸೌಮ್ಯ ರವರ ಸಹಕಾರದಿಂದ ಎಲ್ಲ ಶಾಲೆಗಳಿಗಿಂತ ವಿಭಿನ್ನವಾಗಿ ಹೆಜ್ಜೆ ಹಾಕಿ, ಶೈಕ್ಷಣಿಕ, ನೈತಿಕ ಗುಣಮಟ್ಟ ಹೆಚ್ಚುವಂತೆ ಮಾಡಿದೆ.ರಜಾದಿನಗಳಲ್ಲಿಯೂ ಶಿಕ್ಷಕರು ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಬಗ್ಗೆ ಹೇಳಿಕೊಡುವುದು ಅವರ ಸೇವಾ ದಕ್ಷತೆ. ಶಿಕ್ಷಣ ಪ್ರೇಮಕ್ಕೆ ಸಾಕ್ಷಿ.
ಒಟ್ಟಾರೆ ಊರು ಒಂದು ಗೂಡಿದರೆ ಏನು ಬೇಕಾದರೂ ಮಾಡಬಹುದು ಅನ್ನೋದನ್ನು ಬಿದರಹಳ್ಳಿ ಗ್ರಾಮದ ಜನರು ಸಾಧಿಸಿ ತೋರಿಸಿದ್ದಾರೆ.ಹಳ್ಳಿಯ ಸರ್ಕಾರಿ ಶಾಲೆಯೊಂದರ ಹೆಸರು ನಾಡಿನಲ್ಲಿ ಹೆಸರು ಮಾಡಿದೆ ಎಂದರೆ ಅದಕ್ಕೆ ಆ ಊರವರ ಸಹಕಾರ ಖಂಡಿತ ದೊಡ್ಡದಾಗಿರಬೇಕು.
ಶಾಲೆಯ ಶಿಕ್ಷಕರು, ಪೋಷಕರು, ಜನಪ್ರತಿನಿಧಿಗಳು, ಶಾಲಾಭಿವದ್ಧಿ ಸಮಿತಿಯ ಸದಸ್ಯರು, ಶಿಕ್ಷಣ ಸಂಯೋಜಕರು, ಕ್ಷೇತ್ರಶಿಕ್ಷಣಾಧಿಕಾರಿಗಳು ಎಲ್ಲಾ ಸೇರಿ ಒಮ್ಮನಸ್ಸಿನಿಂದ ಶಾಲೆಯ ಅಭಿವದ್ಧಿಗೆ ದುಡಿದಿದ್ದೇವೆ. ಶಾಲೆಯೇ ನಮ್ಮ ನಿತ್ಯದ ಚಿಂತನೆಯ ವಿಷಯ, ವಾರಕೊಮ್ಮೆ ಶಾಲೆಯ ಭೇಟಿ, ತಿಂಗಳಿಗೊಂದು ಶಾಲೆಯ ಪಾಲಕರ, ಶಾಲಾಭಿವದ್ಧಿ ಸಮಿತಿಯ ಸದಸ್ಯರ ಸಭೆಯನ್ನು ಕಡ್ಡಾಯವಾಗಿ ನಿಯಮಿತವಾಗಿ ನಡೆಸುತ್ತೇವೆ ಎಂದು ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವುಕುಮಾರ್ ಹಾಗೂ ಸಮಿತಿಯ ಸದಸ್ಯರುಗಳಾದ ರಾಜೇಶ್,ಪುರುಷೋತ್ತಮ್, ದಾನಪ್ಪ ಮತ್ತು ರಾಘವೇಂದ್ರ ಒಕ್ಕೊರಲಿನಿಂದ ಹೇಳುತ್ತಾರೆ.
78 ವಿದ್ಯಾರ್ಥಿಗಳು ಕಲಿಯುತ್ತಿರುವ ಈ ಸರ್ಕಾರಿ ಶಾಲೆಯಲ್ಲಿ ಕಲಿಸಲು ಐದು ಜನ ಅತ್ಯುತ್ತಮ ಶಿಕ್ಷಕರಿದ್ದಾರೆ.ಸೌರಚಾಲಿತ ಪಠ್ಯಾಧಾರಿತ ಸ್ಮಾರ್ಟ್ ಕ್ಲಾಸ್, ಹೈಟೆಕ್ ಶೌಚಾಲಯ , ಸಾಕಷ್ಟು ಸುಸಜ್ಜಿತ ಕೊಠಡಿಗಳು, ಕಲಿಕೋಪಕರಣಗಳು, ಪೀಠೋಪಕರಣಗಳು, ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ವ್ಯವಸ್ಥೆ, ಜೆರಾಕ್ಸ್ ವ್ಯವಸ್ಥೆ ಎಲ್ಲವೂ ಇದ್ದು ವಿದ್ಯಾರ್ಥಿಗಳು ನಗುಮುಖದಿಂದ ಕಲಿಕೆಯಲ್ಲಿ ನಿರತರಾಗುರುವುದನ್ನು ಕಂಡಾಗ, ಶಾಲೆಯ ಸುಂದರ ಕಟ್ಟಡಗಳು,ಉದ್ಯಾನವನ್ನು ನೋಡುವಾಗ ಯಾರಿಗಾದರೂ ಆನಂದವಾಗಲೇಬೇಕು. ಉದ್ಯಾನವನದಲ್ಲಿ ನಿಮ್ಮನ್ನು ಕೈ ಬೀಸಿ ಕರೆಯುವ ಸರ್ವ ಸಿದ್ಧಿವಿನಾಯಕನ ವಿಗ್ರಹ,ತರಗತಿಯ ಮುಂಭಾಗ ಅಳವಡಿಸಿರುವ ನಾಮಫಲಕಗಳು ಹೆಚ್ಚು ಆಕರ್ಷಿತವಾಗಿಸುತ್ತದೆ. ಇಷ್ಟು ಮಾತ್ರವಲ್ಲ ಶಾಲೆಗೆ ಪ್ರತ್ಯೇಕವಾಗಿ ಸುಸಜ್ಜಿತ ಸೈಕಲ್ ನಿಲ್ದಾಣವು ಇದೆ.
ಖಾಸಗಿ ಶಾಲೆಯತ್ತ ಆಕರ್ಷಿತರಾಗುವ ಈ ಸಂಧರ್ಭದಲ್ಲಿ ಸರ್ಕಾರಿ ಶಾಲೆಯೊಂದು ಶಿಕ್ಷಕರ ಹಾಗೂ ಗ್ರಾಮಸ್ಥರ ಸಹಕಾರದಿಂದ ಎಂಥಹ ಬಲಿಷ್ಠ ಖಾಸಗಿ ಶಾಲೆಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆದು ನಿಂತಿರುವುದು ಹೆಮ್ಮೆಯ ಸಂಗತಿಯಾಗಿದೆ.