ರಿಪ್ಪನ್‌ಪೇಟೆ : ಇಡೀ ಜಗತ್ತಿನಲ್ಲಿ ಕನ್ನಡ ತೆರೆದುಕೊಳ್ಳಬೇಕಾದರೆ ಕನ್ನಡಕ್ಕೆ ಮಡಿವಂತಿಕೆಯ ಬೇಲಿ ಬೇಡ ಎಂದು ಸಾಹಿತಿಗಳು ಹಾಗೂ ಉಪನ್ಯಾಸಕರಾದ ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.
ಪಟ್ಟಣದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ರಿಪ್ಪನ್ ಪೇಟೆ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಶನಿವಾರ ಸಂಜೆ ನಡೆದ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಪ್ರಸ್ತುತ ಆಧುನಿಕ ಕಾಲದಲ್ಲಿ ಸಂಶೋಧನೆ, ವೈದ್ಯಕೀಯ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಸರಳವಾಗಿ ಬಳಸುವಂತಾಗಬೇಕು. ಹೊಸ ಕಾಲಕ್ಕೆ ಕನ್ನಡ ಕಟ್ಟುವ ಕೆಲಸವಾಗಬೇಕು,ಕನ್ನಡ ಭಾಷೆಯಲ್ಲಿ ಪರ್ಷಿಯನ್ ಭಾಷೆಯ ಹಲವಾರು ಪದಗಳು ಈಗಲೂ ನಿತ್ಯ ಬಳಕೆಯಲ್ಲಿವೆ ಅದನ್ನೂ ತೆಗೆದುಹಾಕಿ ಹೊಸದಾಗಿ ಕನ್ನಡ ಕಟ್ಟುತ್ತೇವೆ ಎನ್ನುವುದು ಮೂರ್ಖತನ ಎಂದರು.
ಕೇವಲ 400 ವರ್ಷಗಳ ಇತಿಹಾಸವಿರುವ ಆಂಗ್ಲ ಭಾಷೆ ಮಡಿವಂತಿಕೆ ಬಿಟ್ಟು ಎಲ್ಲಾ ಭಾಷೆಗಳನ್ನು ಬಳಸಿಕೊಳ್ಳುತ್ತಿರುವುದಕ್ಕೆ ಆ ಭಾಷೆ ಪ್ರಪಂಚದಾದ್ಯಂತ ಬೆಳೆದಿದೆ.ಕನ್ನಡವನ್ನು ಬೆಳೆಸಬೇಕಾದಲ್ಲಿ ಭಾಷೆಗೆ ಮಡಿವಂತಿಕೆಯ ಬೇಲಿ ಹಾಕಬಾರದು ಎಂದರು.
ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ 206 ನೇ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ಸೂಚಿಸಿ,ರಾಷ್ಟ್ರ ಕವಿ ಕುವೆಂಪು ತಮ್ಮ ರಾಮಾಯಣ ದರ್ಶನಂ ಕೃತಿಯಲ್ಲಿ ಮಲೆನಾಡಿನ ವಾತವರಣಗಳನ್ನು ತುಂಬಾ ಸೊಗಸಾಗಿ ಬಣ್ಣಿಸಿದ್ದಾರೆ ಎಂದು ಕೆಲ ಸನ್ನಿವೇಶಗಳನ್ನು ಹೇಳಿದರು.
ಹೊಸನಗರ ತಾಪಂ ಮಾಜಿ ಸದಸ್ಯ ಹಾಗೂ ಒಕ್ಕಲಿಗ ಸಂಘದ ತಾಲೂಕ್ ಅಧ್ಯಕ್ಷರಾದ ಎಂ ಬಿ ಲಕ್ಷ್ಮಣಗೌಡ ರವರ ಆತಿಥ್ಯದಲ್ಲಿ ಅವರ ಸ್ವಗೃಹದಲ್ಲಿ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಸೊರಬದ ಹಾಸ್ಯ ಕಲಾವಿದರಾದ ಬಣ್ಣದ ಬಾಬು ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕಥೆಗಾರ ನಾಗಪ್ರಸಾದ್ ಕಥೆ ಹೇಳಿದರು. ಕವಿಗಳಾದ ಡಾ. ರತ್ನಾಕರ ಕುನುಗೋಡು, ಕು. ರಚನಾ ಕಾಮತ್, ಡಿ. ಗಣೇಶ್, ಮಂಜುನಾಥ ಭಂಡಾರಿ, ಎಚ್. ಎ. ಪಾಟೀಲ ಅವರು ಸ್ವರಚಿತ ಕವನಗಳನ್ನು ವಾಚಿಸಿದರು. ಮಂಜುನಾಥ ಕಾಮತ್ ಹನಿಗವನ ಹೇಳಿದರು. ಗಾಯಕರಾದ ಡಾ. ಎ. ಎಂ. ಕೃಷ್ಣರಾಜ್, ಸಂಧ್ಯಾ ಜಿ. ಕಾಮತ್, ಎಚ್. ಸಿ. ತಿಮ್ಮಪ್ಪ, ನಾಗರತ್ನ ದೇವರಾಜ್, ಪಿಯೂಸ್ ರೋಡ್ರಿಗಸ್, ವಿವಿಧ ಹಾಡುಗಳನ್ನು ಹೇಳಿದರು. ಕು. ನಿಖಿತಾಶೆಟ್ಟಿ ಗಿಟಾರ್ ನುಡಿಸಿದರು.ಮಕ್ಕಳು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ ಮಂಜುನಾಥ್ ವಹಿಸಿದ್ದರು.
ಈ ಸಂಧರ್ಭದಲ್ಲಿ ರೋಟರಿ ಅಧ್ಯಕ್ಷೆ ಪ್ರಮೀಳಾ ಎಲ್ ಗೌಡ,ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ,ಕಸಾಪ ತಾಲ್ಲೂಕು ಅಧ್ಯಕ್ಷರಾದ ತ.ಮ. ನರಸಿಂಹ, ಕರ್ನಾಟಕ ಜಾನಪದ ಪರಿಷತ್ತು ತಾ. ಅಧ್ಯಕ್ಷರಾದ ಎಂ. ಎಂ. ಪರಮೇಶ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾ. ಅಧ್ಯಕ್ಷರಾದ ನಗರ ರಾಘವೇಂದ್ರ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮತ್, ಮೂರು ಸಂಸ್ಥೆಗಳ ಹೋಬಳಿ ಅಧ್ಯಕ್ಷರಾದ ಆರ್. ನಾಗಭೂಷಣ, ಆರ್. ಉಮೇಶ್, ಆರ್. ಎಚ್. ದೇವಿದಾಸ್,ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಮೀರ ಹಂಜಾ ಸೇರಿದಂತೆ ಇನ್ನಿತರರಿದ್ದರು.