ಶಿವಮೊಗ್ಗ : ಹೊಸ ವರ್ಷದ ಪಾರ್ಟಿ ವೇಳೆ ಗುಂಡು ತಗುಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ಗುಂಡು ಹಾರಿಸಿದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಗರದ ವಿದ್ಯಾನಗರದಲ್ಲಿರುವ ಮಂಜುನಾಥ ಓಲೇಕರ್ ಎಂಬುವವರ ಮನೆಯಲ್ಲಿ ಪಾರ್ಟಿ ನಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಕುಟುಂಬದವರೊಂದಿಗೆ ಹೊಸ ವರ್ಷಾಚರಣೆ ಮಾಡುತ್ತಿದ್ದರು.
ಸರಿಯಾಗಿ 12 ಗಂಟೆಗೆ ಮಂಜುನಾಥ ಓಲೇಕರ್ ಅವರು ತಮ್ಮ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಮಂಜುನಾಥ ಓಲೇಕರ್ ಅವರು ಹಾರಿಸಿದ ಗುಂಡು ಮಿಸ್ ಫೈರ್ ಆಗಿದೆ. ಪಾರ್ಟಿ ಮಾಡುತ್ತಿದ್ದ ಯುವಕನಿಗೆ ಗುಂಡು ತಗುಲಿ, ಗಂಭೀರ ಗಾಯಗೊಂಡಿದ್ದಾನೆ. ಕೂಡಲೆ ಯುವಕನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯುವಕನಿಗೆ ಗುಂಡು ತಗುಲುತ್ತಿದ್ದಂತೆ ಮಂಜುನಾಥ ಓಲೇಕರ್ ಅವರು ಆತಂಕಕ್ಕೀಡಾಗಿದ್ದಾರೆ. ಹೃದಯಾಘಾತ ಸಂಭವಿಸಿ, ಮೃತಪಟ್ಟಿದ್ದಾರೆ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.