Ripponpete | ಕೆರೆಯ ಜಾಗದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಕಟ್ಟಡ – ಅಧಿಕಾರಿಗಳ ಬೇಜವಬ್ದಾರಿಯ ನಡೆ | ಗ್ರಾಮಸ್ಥರ ಆಕ್ರೋಶ
ರಿಪ್ಪನ್ಪೇಟೆ: ಸಮೀಪದ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಸರ್ವೇ ನಂ.12ರ ಗುಳಗುಳಿ ಶಂಕರದಲ್ಲಿ ಕೆರೆ ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಿಸುರುವುದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಳ್ಳೂರು-ಆಯನೂರು-ಶಿವಮೊಗ್ಗ ಮುಖ್ಯ ರಸ್ತೆಯಲ್ಲಿನ ಪ್ರಸಿದ್ಧ ಗುಳಗುಳಿ ಶಂಕರೇಶ್ವರ ದೇವಸ್ಥಾನ ಮತ್ತು ಜಟಾತೀರ್ಥದ ಎದುರು ಇರುವ ಕೆರೆಯನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಕೆರೆ ನೀರನ್ನು ಆಶ್ರಯಿಸುವ ಜಾನುವಾರು, ಪ್ರಾಣಿ ಪಕ್ಷಿ ಸಂಕುಲಗಳಿಗೆ ತೊಂದರೆಯಾಗಿದೆ ಎಂದು ಗ್ರಾಪಂ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಕೆರೆ ನಮಗೆ ಸೇರುವುದಿಲ್ಲ. ಅದು ವನ್ಯಜೀವಿ ವಿಭಾಗದ ಜಾಗಕ್ಕೆ ಸೇರಿರುವುದು ಎಂದು ಗ್ರಾಮ ಪಂಚಾಯಿತಿ ಹೇಳುತ್ತಿದೆ. ಇತ್ತ ಅರಣ್ಯ ಇಲಾಖೆಯು ಕೆರೆ ಸಂರಕ್ಷಣೆ ಸ್ಥಳೀಯ ಆಡಳಿತಕ್ಕೆ ಸೇರುತ್ತದೆ ಎನ್ನುತ್ತಿದೆ. ಜವಾಬ್ದಾರಿಯಿಂದ ನುಣಚಿಕೊಳ್ಳುವುದನ್ನು ಬಿಟ್ಟು ಕೂಡಲೇ ಗ್ರಾಮಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಕೆರೆ ಸಂರಕ್ಷಣೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.