94ಸಿ ಹಾಗೂ ಬಗರ್‌ಹುಕುಂ ಹಕ್ಕು ಪತ್ರ ವಿತರಣೆ ; ಜಮೀನು ಮಂಜೂರು ವಿಚಾರದಲ್ಲಿ ನಯಾ ಪೈಸೆ ಹಣ ಕೊಡಬೇಡಿ ; ಸಚಿವ ಆರಗ ಜ್ಞಾನೇಂದ್ರ
ಹೊಸನಗರ: ಜಮೀನು ಮಂಜೂರಾತಿ ವಿಚಾರದಲ್ಲಿ ಅಧಿಕಾರಿಗಳು ಹಣ ಕೇಳುವ ಕುರಿತಾಗಿ ಸಾಕಷ್ಟು ದೂರು ಬಂದಿದ್ದು ರೈತರು ನಯಾ ಪೈಸೆ ಕೊಡಬೇಡಿ. ಅರ್ಹ ಫಲಾನುಭವಿ ರೈತರಿಗೆ ಹಕ್ಕುಪತ್ರ ಸಿಕ್ಕೆ ಸಿಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ 94 ಸಿ ಹಾಗೂ ರೈತರಿಗೆ ಬಹರ್‌ಹುಕುಂ ಸಾಗುವಳಿ ಹಕ್ಕು ಪತ್ರ ಹಾಗೂ ವಾಸದ ಮನೆ 94ಸಿ ಹಕ್ಕುಪತ್ರ ವಿತರಿಸಿ ನಂತರ ಮಾತನಾಡಿ, ರೈತರು ತಮ್ಮ ಜಮೀನಿನ ಹಕ್ಕುಪತ್ರ ಪಡೆಯುವುದು ಅವರ ಹಕ್ಕು ಆಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರೈತರ ಜಮೀನುಗಳಿಗೆ ಹಕ್ಕು ಪತ್ರ ನೀಡುವುದು ಒಂದು ಪುಣ್ಯದ ದೇವರ ಕೆಲಸವಾಗಿದೆ. ಆದರೆ ಇಲ್ಲಿ ಹಕ್ಕುಪತ್ರದಲ್ಲಿ ಹಣ ಮಾಡುವ ತಂತ್ರಗಾರಿಕೆ ನಡೆಯುತ್ತಿದ್ದು ಇದು ಶಿಕ್ಷಾರ್ಹ ಅಪರಾಧವಾಗಿದೆ. ಇಲ್ಲಿ ಅಧಿಕಾರಿಗಳ ಮತ್ತು ಮಧ್ಯವರ್ತಿಗಳ ಕೈಗೆ ಹಣ ನೀಡುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿದೆ. ಇದು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ ನಾನು ಇಂತಹ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ಉಗ್ರ ಕ್ರಮ ಕೈಗೊಳ್ಳುತ್ತೇನೆ. ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ರೈತರಿಂದ ಹಣ ಪಡೆದುಕೊಂಡಿದ್ದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮಕ್ಕೆ ಅವಕಾಶವಿಲ್ಲ: ಈ ಹಿಂದೆ 1918ರಲ್ಲಿ ನಮ್ಮ ಸರ್ಕಾರ ಬರುವ ಮುಂಚೆ ಸಾಗುವಳಿ ಮಾಡದ ಮತ್ತು ಅಕೇಶಿಯಾ ನೆಡುತೋಪು ಪ್ರದೇಶದಲ್ಲೂ ಬಗರ್‌ಹುಕುಂ ಹಕ್ಕಪತ್ರ ನೀಡಿದ ಉದಾಹರಣೆ ಇದೆ. ರೈತರಿಂದ ಲಕ್ಷ ಲಕ್ಷ ಹಣ ಪಡೆದು ಮನಬಂದಂತೆ ಹಕ್ಕುಪತ್ರ ಮಂಜೂರು ಮಾಡಲಾಗಿದೆ. ಲಕ್ಷಾಂತರ ರೂಗಳಿಗೆ ಹಕ್ಕುಪತ್ರ ಬಿಕರಿ ಆಗಿವೆ. ನಕಲಿ ಹಕ್ಕುಪತ್ರದ ಜಾಲವೇ ಹೊಸನಗರದಲ್ಲಿ ಇತ್ತು ಆದರೆ ನಮ್ಮ ಸರ್ಕಾರ ಬಂದ ಮೇಲೆ ಇದೆಕ್ಕೆಲ್ಲ ಕಡಿವಾಣ ಹಾಕಲಾಗಿದೆ. ಆದರೂ ಹಣಕ್ಕಾಗಿ ಪೀಡಿಸುವ ಪರಿಪಾಠ ನಡೆಯುತ್ತಲೆ ಇದೆ. ಇಂತಹ ಅಕ್ರಮವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ತಾಲ್ಲೂಕು ಕಛೇರಿಯ ತಹಶೀಲ್ದಾರ್ ಮತ್ತು ಸಿಬ್ಬಂದಿಗಳು ರೈತರ ಪರವಾಗಿ ಕೆಲಸನಮಾಡುತ್ತಿದ್ದಾರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕು ಅರ್ಹ ರೈತರಿಗೆ ಹಕ್ಕುಪತ್ರ ಸಿಗಬೇಕು. ಇಲ್ಲಿ ರಾಜಕೀಯವಿಲ್ಲ ಎಲ್ಲಾ ರೈತರಿಗೂ ಸಮಾನ ನ್ಯಾಯ ಎಂದರು.
ಬಜೆಟ್ ಜನತೆಗೆ ಖುಷಿ ಕೊಟ್ಟಿದೆ: ಮುಖ್ಯಮಂತ್ರಿ ಬೊಮ್ಮಾಯಿ ಮಂಡಿಸಿದ 3.09 ಲಕ್ಷಕೋಟಿ ಬಜೆಟ್‌ನ್ನುರಾಜ್ಯದಜನರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಬಜೆಟ್ ರೈತರಿಗೆ ಖುಷಿ ಕೊಟ್ಟಿದೆ. ರಾಜ್ಯದ ಎಲ್ಲಾ ಜನರ ಹಿತಕಾಯಲಾಗಿದೆ. ಇದೊಂದು ಸರ್ವವ್ಯಾಪಿ. ಸರ್ವಸುಖಿ ಬಜೆಟ್ ಆಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಅಡಿಕೆಗೆ ಉತ್ತಮ ಬೆಲೆ: ಈ ಹಿಂದಿನ ಒಪ್ಪಂದದ ಪ್ರಕಾರ ವಿದೇಶಿ ಅಡಿಕೆ ದೇಶಕ್ಕೆ ಬರುತ್ತಿದೆ. ಅಲ್ಲಿನ ಕಳಪೆ ಅಡಿಕೆ ಇಲ್ಲಿನ ಮಾರುಕಟ್ಟೆಯಲ್ಲಿ ಹೋಗುವುದಿಲ್ಲ. ವಿದೇಶಿ ಅಡಿಕೆಗೆ ಕಡಿವಾಣ ಹಾಕುವಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ನಮ್ಮ ಅಡಿಕೆಗೆ ಉತ್ತಮ ಮಾರುಕಟ್ಟೆ ಲಭ್ಯವಾಗಲಿದೆ ಎಂದ ಸಚಿವರು ಬಜೆಟ್‌ನಲ್ಲೂ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಹಣ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ರಾಜೀವ್, ಶಿರಾಸ್ಥೆದಾರ್ ಸುಧೀಂದ್ರಕುಮಾರ್, ಚುನಾವಣೆ ಅಧಿಕಾರಿ ವಿನಯ್ ಎಂ ಆರಾಧ್ಯ, ಚಿರಾಗ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕೌಶಿಕ್, ಹಾಗೂ ತಾಲ್ಲೂಕು ಕಛೇರಿಯ ಸಿಬ್ಬಂದಿಗಉ ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಂಕ್ರೀಬೀಡು ಮಂಜುನಾಥ್, ಸದಸ್ಯರಾದ ನಾಗೇಂದ್ರಪ್ಪಗೌಡ, ವೀಣಾ, ಭಾಗ್ಯಮ್ಮ ಇನ್ನೂ ಮುಂತಾದವರು ಇದ್ದರು.
112 ನೇ ಸರ್ವೆ ನಂಬರ್ ನಲ್ಲಿ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಮುಂದಾದ ಸಚಿವರು : ಹೊಸನಗರದಿಂದ ಕೇವಲ 1ಕಿ.ಮೀ ದೂರದಲ್ಲಿ ಸುಮಾರು 300 ಮನೆಗಳಿದ್ದು ಸರ್ಕಾರಿ ಕಛೇರಿಗಳಿವೆ ಮಾರಿಗುಡ್ಡದಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುತ್ತಿದೆ ಎಂದು ಅಲ್ಲಿನ ಸಾರ್ವಜನಿಕರು ಕೃಷಿಕ ರತ್ನಾಕರ್‌ರವರ ನೇತೃತ್ವದಲ್ಲಿ ಸುಮಾರು 300 ಜನರು ಮನವಿ ಅರ್ಪಿಸಿ ತಕ್ಷಣ ಈ ಕಲ್ಲು ಕ್ವಾರೆಯನ್ನು ನಿಲ್ಲಿಸಲು ಮನವಿ ಮಾಡಿದ ಮೇರೆಗೆ ತಕ್ಷಣ ಗಣಿ ಭೂ ವಿಜ್ಞಾನ ಇಲಾಖೆಯ ಗಮನಕ್ಕೆ ತರುವುದರ ಜೊತೆಗೆ ತಹಶೀಲ್ದಾರ್ ರಾಜೀವ್ ಹಾಗೂ ಸಿಬ್ಬಂದಿಗೆ ತಕ್ಷಣ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೌಖಿಕವಾಗಿ ಸೂಚಿಸಿದರು.