ತೀರ್ಥಹಳ್ಳಿ: ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ತೀರ್ಥಹಳ್ಳಿಯಲ್ಲಿ ಹೃದಯಾಘಾತವಾದ ಘಟನೆ ನಡೆದಿದ್ದು ಆತನನ್ನು ಬದುಕಿಸಲು ತೀರ್ಥಹಳ್ಳಿಗರು ಹೋರಾಟ ನಡೆಸಿದ್ದಾರೆ.
ಶುಕ್ರವಾರ ಶಿವಮೊಗ್ಗ-ಮಂಗಳೂರಿಗೆ ದುರ್ಗಾಂಬಾ ಬಸ್ ಹೊರಟಿತ್ತು. ಇನ್ನೇನು ತೀರ್ಥಹಳ್ಳಿ ತಲುಪುವ ಹೊತ್ತಿಗೆ ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ. ಇದನ್ನ ಗಮನಿಸಿದ ಕಂಡಕ್ಟರ್, ಡ್ರೈವರ್ಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಚಾಲಕ ಬಸ್ನ್ನ ತೀರ್ಥಹಳ್ಳಿ ಜೆಸಿ ಆಸ್ಪತ್ರೆ ಕಡೆಗೆ ಚಲಾಯಿಸಿದ್ದಾನೆ. ಸಮಯಕ್ಕೆ ಸರಿಯಾಗಿ ಬಸ್ನ್ನ ಆಸ್ಪತ್ರೆಗೆ ಚಲಾಯಿಸಿದ ಡ್ರೈವರ್ ಹಾಗೂ ಕಂಡಕ್ಟರ್, ಅಲ್ಲಿ ಪ್ರಯಾಣಿಕನನ್ನ ದಾಖಲಿಸಿ, ಮುಂದಕ್ಕೆ ಹೋಗಿದ್ದಾರೆ.
ಆ್ಯಂಬುಲೆನ್ಸ್ ಡ್ರೈವರ್ಗಳ ಮಾನವೀಯತೆ:
ಇನ್ನೂ ಹೃದಯಾಘಾತಕ್ಕೊಳಗಾದ ಪ್ರಯಾಣಿಕನ ಪರಿಸ್ಥಿತಿ ಗಂಭೀರವಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದರೂ ಸಹ, ತುರ್ತಾಗಿ ಹೆಚ್ಚಿನ ಟೆಂಟ್ ಒದಗಿಸುವ ಅಗತ್ಯವಿತ್ತು. ಆಗ ಅಲ್ಲಿದ್ದ ಆಂಬುಲೆನ್ಸ್ ಡ್ರೈವರ್ ರಂಜಿತ್, ರಹಮತ್, ಪವನ್ರವರು ಪ್ರಯಾಣಿಕನನ್ನು ಶಿವಮೊಗ್ಗದ ಆಸ್ಪತ್ರೆಗೆ ಶಿಫ್ಟ್ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ, ಕೆಲವೇ ಹೊತ್ತಿನಲ್ಲಿ ಶಿವಮೊಗ್ಗದ ಆಸ್ಪತ್ರೆಯೊಂದಕ್ಕೆ ಪ್ರಯಾಣಿಕನನ್ನ ಶಿಫ್ಟ್ ಮಾಡಿ, ಆತನಿಗೆ ಸಿಗಬೇಕಿದ್ದ ತುರ್ತು ಚಿಕಿತ್ಸೆ ಕೊಡಿಸಿದ್ದಾರೆ.
ಕೊನೆಗೂ ಉಳಿಯಿತು ಜೀವ
ಸದ್ಯ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಯಲ್ಲಿದ್ದಾರೆ. ಅವರು ಯಾರು? ಎಲ್ಲಿಯವರು ? ಎಂದು ಹೇಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಬಸ್ನಲ್ಲಿ ಅವರ ಜೊತೆ ಯಾರು ಪ್ರಯಾಣಿಸುತ್ತಿರಲಿಲ್ಲ? ಡ್ರೈವರ್, ಕಂಡಕ್ಟರ್, ಜೆಸಿ ಆಸ್ಪತ್ರೆಯ ಸಿಬ್ಬಂದಿ, ಆ್ಯಂಬುಲೆನ್ಸ್ ಡ್ರೈವರ್ ಹೀಗೆ ಎಲ್ಲರೂ ಸಹ ಹಾರ್ಟ್ ಅಟ್ಯಾಕ್ ತುತ್ತಾದ ವ್ಯಕ್ತಿಯ ಪೂರ್ವಪರ ಕೇಳುವ ಗೋಜಿಗೂ ಹೋಗಲಿಲ್ಲ. ಬದಲಾಗಿ ಹೇಗಾದರೂ ಸರಿಯೇ ಜೀವ ಉಳಿಸಬೇಕು ಎಂದು ಪ್ರಯತ್ನ ಪಟ್ಟರು. ಅದರ ಫಲವಾಗಿ ಪ್ರಯಾಣಿಕನ ಜೀವ ಉಳಿದಿದೆ.