ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ! | Shivamogga POCSO court sentences three accused to 20 years of rigorous imprisonment in a minor sexual assault case. Victim awarded ₹7 lakh compensation.
ಶಿವಮೊಗ್ಗ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಆತನಿಗೆ ಸಹಕಾರ ನೀಡಿದ ಇಬ್ಬರು ಆರೋಪಿಗಳಿಗೆ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್ಟಿಎಸ್ಸಿ-1) ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಪೋಕ್ಸೋ ಕಾಯ್ದೆಯಡಿ ಶಿಕ್ಷೆಗೆ ಗುರಿಯಾದ ಮೂವರು ಆರೋಪಿಗಳಿಗೆ ಒಟ್ಟು 3.29 ಲಕ್ಷ ರೂ. ದಂಡವನ್ನೂ ನ್ಯಾಯಾಲಯ ವಿಧಿಸಿದೆ.
ಲೈಂಗಿಕ ದೌರ್ಜನ್ಯ ಎಸಗಿದ 28 ವರ್ಷದ ಯುವಕ, ಬಾಲಕಿಯನ್ನು ಕರೆದೊಯ್ಯಲು ಕಾರು ಒದಗಿಸಿದ್ದ 33 ವರ್ಷದ ವ್ಯಕ್ತಿ ಹಾಗೂ ಆರೋಪಿಗಳಿಗೆ ಉಳಿದುಕೊಳ್ಳಲು ಸ್ಥಳಾವಕಾಶ ಕಲ್ಪಿಸಿದ್ದ ಮತ್ತೊಬ್ಬ 28 ವರ್ಷದ ಯುವಕ ಶಿಕ್ಷೆಗೆ ಗುರಿಯಾದವರು.
ಇದಲ್ಲದೆ, ದಂಡದ ಮೊತ್ತದಲ್ಲಿ 3 ಲಕ್ಷ ರೂ.ಗಳನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ಹಾಗೂ ಸರ್ಕಾರದ ವತಿಯಿಂದ 4 ಲಕ್ಷ ರೂ. ಪರಿಹಾರ ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್ ಅವರು ಈ ತೀರ್ಪು ನೀಡಿದ್ದು, ಸರ್ಕಾರದ ಪರವಾಗಿ ಅಭಿಯೋಜಕ ಶ್ರೀಧರ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ :
ಪ್ರಕರಣದ ಮೊದಲ ಆರೋಪಿಯಾದ 28 ವರ್ಷದ ಯುವಕ, 17 ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಮನೆಯಿಂದ ಕರೆದೊಯ್ದಿದ್ದನು. ಈ ಕೃತ್ಯಕ್ಕೆ ಎರಡನೇ ಆರೋಪಿ ತನ್ನ ಕಾರನ್ನು ಒದಗಿಸಿದ್ದರೆ, ಮೂರನೇ ಆರೋಪಿ ಆರೋಪಿಗಳಿಗೆ ಉಳಿದುಕೊಳ್ಳಲು ತನ್ನ ಸ್ಥಳದಲ್ಲಿ ಅವಕಾಶ ಕಲ್ಪಿಸಿದ್ದನು.
ಈ ಸಂದರ್ಭದಲ್ಲಿ ಮೊದಲ ಆರೋಪಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ರುದ್ರೇಶ್ ಕೆ.ಪಿ. ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
