w
Headlines
Home » ರಿಪ್ಪನ್‌ಪೇಟೆ : ಬೇಳೂರು ಗೋಪಾಲಕೃಷ್ಣ ವಿರುದ್ಧದ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

ರಿಪ್ಪನ್‌ಪೇಟೆ : ಬೇಳೂರು ಗೋಪಾಲಕೃಷ್ಣ ವಿರುದ್ಧದ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

Screenshot 2026 10 27 12 18 21 033 com.openai.chatgpt edit

ರಿಪ್ಪನ್‌ಪೇಟೆ : ಬೇಳೂರು ಗೋಪಾಲಕೃಷ್ಣ ವಿರುದ್ಧದ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು | Ripponpete news: Congress leader B.G. Chandramouli responds to allegations against MLA Belur Gopalakrishna and discusses electricity infrastructure development in the region.

ರಿಪ್ಪನ್‌ಪೇಟೆ: ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಜನಪ್ರಿಯತೆಯನ್ನು ಸಹಿಸಲಾಗದೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಪುರಾವೆ ಇಲ್ಲದೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕರು ಲಂಚದ ಹಣವನ್ನು ಗಣಪತಿ ಹಬ್ಬ ಹಾಗೂ ಬಡವರಿಗೆ ಹಂಚುತ್ತಾರೆ ಎಂದು ಹಾಲಪ್ಪ ಅವರು ಮಾಡಿರುವ ಆರೋಪವನ್ನು ತೀವ್ರವಾಗಿ ಖಂಡಿಸಿದರು. ಕಳೆದ ಮೂರು ವರ್ಷಗಳಿಂದ ಮೌನವಾಗಿದ್ದ ವಿರೋಧ ಪಕ್ಷದವರು, ಇದೀಗ ಶಾಸಕರ ಅಭಿವೃದ್ಧಿ ಕಾರ್ಯ ಹಾಗೂ ಜನಪ್ರಿಯತೆಯನ್ನು ಕಂಡು ಹತಾಶರಾಗಿ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

​ಶುಕ್ರವಾರ ರಿಪ್ಪನ್‌ಪೇಟೆಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಹಿಂದೆ ಹಾಲಪ್ಪ ಅವರೇ ಶಾಸಕರಾಗಿದ್ದ ಅವಧಿಯಲ್ಲಿ ಜಲಾಶಯಗಳು ತುಂಬಿದ್ದರೂ ವಿದ್ಯುತ್ ಸಮಸ್ಯೆ ತಲೆದೋರಿರಲಿಲ್ಲವೇ ಎಂದು ಪ್ರಶ್ನಿಸಿದ ಚಂದ್ರಮೌಳಿ, ಪ್ರಸ್ತುತ ವಿದ್ಯುತ್ ವ್ಯತ್ಯಯದ ಕುರಿತು ಶಾಸಕರು ಈಗಾಗಲೇ ಮೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ರಿಪ್ಪನ್‌ಪೇಟೆ ಭಾಗಕ್ಕೆ 60 ಮೆಗಾವ್ಯಾಟ್ ಸಾಮರ್ಥ್ಯದ ಟಿಸಿ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಅಧಿಕಾರಿಗಳು ಕ್ಷೇತ್ರಕ್ಕೆ ಬರಲು ಶಾಸಕರಿಗೆ ಹಣ ನೀಡಬೇಕು ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, ಮಾಜಿ ಸಚಿವರ ಅಧಿಕಾರಾವಧಿಯಲ್ಲಿ ಮರಳು ಮಾಫಿಯಾ ಹೇಗೆ ನಡೆದಿತ್ತು ಎಂಬುದು ಇಡೀ ಕ್ಷೇತ್ರದ ಜನತೆಗೆ ತಿಳಿದಿದೆ. ತಾವು ಮಾಡಿದ ಕೆಲಸವನ್ನೇ ಇತರರೂ ಮಾಡುತ್ತಾರೆ ಎಂದು ಭಾವಿಸಿ ಅವರು ಆರೋಪಿಸುತ್ತಿದ್ದಾರೆ. ನಮ್ಮ ಶಾಸಕರು ಮರಳು ಮಾಫಿಯಾದಿಂದಾಗಲಿ ಅಥವಾ ಸರ್ಕಾರಿ ಅಧಿಕಾರಿಗಳಿಂದಾಗಲಿ ಹಣ ಪಡೆದಿರುವುದಕ್ಕೆ ಸೂಕ್ತ ದಾಖಲೆ ನೀಡಿದರೆ, ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸವಾಲು ಹಾಕಿದರು. ಮುಂದಿನ ದಿನಗಳಲ್ಲಿ ಶಾಸಕರ ವಿರುದ್ಧ ನಾಲಿಗೆ ಬಿಗಿಹಿಡಿದು ಮಾತನಾಡದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

​ಇದೇ ವೇಳೆ ಕೆರೆಹಳ್ಳಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಈಶ್ವರಪ್ಪ ಗೌಡ ಮಾತನಾಡಿ, ಶಾಸಕರ ಜನಪ್ರಿಯತೆ ಸಹಿಸದೆ ವಿಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ. ಅರಸಾಳು ಹಾಗೂ ಹಾರೋಹಿತ್ಲು ಭಾಗದಲ್ಲಿ ಈಗಾಗಲೇ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸಲಾಗಿದ್ದು, ಉಳಿದ ಭಾಗಗಳಲ್ಲೂ ಬದಲಾವಣೆಗೆ ಶಾಸಕರು ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಕೆಂಚನಾಳ, ಅಮೃತ ಹಾಗೂ ಮಸಗಲ್ಲಿ ಗ್ರಾಮಗಳಲ್ಲಿ ನೂತನ ವಿದ್ಯುತ್ ಉಪಕೇಂದ್ರಗಳ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ಕೆಂಚನಾಳದ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ದೂರದೃಷ್ಟಿಯುಳ್ಳ ಶಾಸಕರಿಗೆ ಅಭಿವೃದ್ಧಿಯ ಪಾಠ ಹೇಳುವ ಅಗತ್ಯವಿಲ್ಲ, ಮುಂದೆ ಅವರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಿಪ್ಪನ್‌ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣಪತಿ, ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ್ ಪಾಲೇಕರ್, ಮುಖಂಡರಾದ ನವೀನ್ ಕೆರೆಹಳ್ಳಿ, ಗಫಾರ್ ಸಾಬ್, ಶ್ರೀಧರ್ ಚಿಗುರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.