ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಆನೆ ಹಾವಳಿ: ರೈತರ ಬೆಳೆಗಳಿಗೆ ಹಾನಿ | Wild elephant attacks in Adderi and Gubbiga villages of Hosanagara taluk damaged agricultural fields and plantations. MLA Beluru Gopalakrishna directed officials to take necessary action.
ಹೊಸನಗರ ತಾಲೂಕು ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೇರಿ ಮತ್ತು ಗುಬ್ಬಿಗ ಗ್ರಾಮಗಳಲ್ಲಿ ಕಾಡಾನೆ ದಾಳಿ ನಡೆಸಿದ್ದು, ತೋಟ ಹಾಗೂ ಗದ್ದೆಗಳಿಗೆ ಹಾನಿಯಾಗಿದೆ. ಇದರಿಂದ ಸ್ಥಳೀಯ ರೈತರು ಆತಂಕಕ್ಕೊಳಗಾಗಿದ್ದು, ಬೆಳೆ ಹಾನಿಯಿಂದ ನಷ್ಟ ಅನುಭವಿಸುವಂತಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸೂಚನೆ ಮೇರೆಗೆ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಅವರು ಸ್ಥಳಕ್ಕೆ ಧಾವಿಸಿ, ಆನೆ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದರು. ಬಳಿಕ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರಿಗೆ ಉಂಟಾಗಿರುವ ನಷ್ಟ ಹಾಗೂ ಕಾಡಾನೆಗಳ ಹಾವಳಿಯ ಕುರಿತು ಮಾಹಿತಿ ಪಡೆದುಕೊಂಡರು.
ನಂತರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ದೂರವಾಣಿ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿ, ಘಟನೆಯ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕಾಡಾನೆಗಳ ಹಾವಳಿಯಿಂದ ರೈತರ ತೋಟ ಹಾಗೂ ಗದ್ದೆಗಳಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಅರಸಾಳು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಉಮಾಕರ್ ಕಾನುಗೋಡು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
