ಸಾಗರ ರಸ್ತೆಯಲ್ಲಿ ಕೆರೆಯಂತಾದ ರಸ್ತೆ – ವಾಹನ ಸವಾರರ ಪರದಾಟ Waterlogging on Sagara Road in Ripponpet near the college has caused severe inconvenience to motorists,.
ರಿಪ್ಪನ್‌ಪೇಟೆ: ಪಟ್ಟಣದ ಪ್ರಮುಖ ಸಂಪರ್ಕ ಮಾರ್ಗವಾದ ಸಾಗರ ರಸ್ತೆಯ ಕಾಲೇಜು ಮುಂಭಾಗದಲ್ಲಿ ನೀರು ಸಂಗ್ರಹವಾಗಿರುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಇಂದು ಸುರಿದ ಮಳೆಯ ಪರಿಣಾಮವಾಗಿ ರಸ್ತೆ ಮೇಲೆ ನೀರು ಹರಿದು ಹೋಗುವ ಬದಲು ಕೆರೆ ರೂಪದಲ್ಲಿ ನಿಂತಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದ್ದರೂ ನೀರು ಸರಿಯಾಗಿ ಹರಿಯಲು ಅಗತ್ಯ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದೇ ಸಮಸ್ಯೆಗೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ವಾಹನ ಸವಾರರು ನೀರು ತುಂಬಿದ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದು, ಹಲವಾರು ಬಾರಿ ಬೈಕ್‌ಗಳು ಜಾರಿ ಬೀಳುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಪಾದಚಾರಿಗಳಿಗೂ ಇದೇ ಪರಿಸ್ಥಿತಿ ಎದುರಾಗಿದ್ದು, ರಸ್ತೆಯನ್ನು ದಾಟಲು ಕಷ್ಟವಾಗುತ್ತಿದೆ.ಸ್ಥಳೀಯರು ಹೇಳುವಂತೆ, ರಸ್ತೆ ಕಾಮಗಾರಿಯ ವೇಳೆ ಸಮರ್ಪಕವಾದ ನೀರು ಹೊರಹಾಕುವ ವ್ಯವಸ್ಥೆ (ಡ್ರೆನೇಜ್) ಕಲ್ಪಿಸದಿರುವುದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಸ್ವಲ್ಪ ಮಳೆಯಾದರೂ ನೀರು ರಸ್ತೆಯಲ್ಲೇ ನಿಂತು ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದೆ.
“ರಸ್ತೆ ಮೇಲೆ ಕೆರೆ ನಿರ್ಮಾಣವಾದಂತೆ ಕಾಣುತ್ತಿದೆ. ಲೋಕೋಪಯೋಗಿ ಇಲಾಖೆಯವರ ದಿವ್ಯ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉಂಟಾಗಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಿ, ನೀರು ಸರಾಗವಾಗಿ ಹರಿಯುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದಂತೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.
