HOSANAGARA | ಬೈಕ್ ಅಪಘಾತ – ದೇವಸ್ಥಾನಕ್ಕೆ ತೆರಳುತ್ತಿದ್ದ ಅರ್ಚಕ ಸಾವು | Archaka Sheshachala Bhatta, 61, died after his scooter skidded near Karigallu village in Hosanagara while he was travelling to a temple for Navaratri festival preparations.
ಹೊಸನಗರ: ನವರಾತ್ರಿ ಉತ್ಸವದ ಸಿದ್ಧತೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಸ್ಕೂಟಿ ಸ್ಕಿಡ್ ಆಗಿ ಅಪಘಾತ ಸಂಭವಿಸಿ ಅರ್ಚಕರೊಬ್ಬರು ಮೃತಪಟ್ಟ ಘಟನೆ ಹೊಸನಗರ ತಾಲೂಕಿನ ಯಡೂರು ಸಮೀಪದ ಕರಿಗಲ್ಲು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಉಳ್ತಿಗಾ ಗ್ರಾಮದ ಮೇಲುಸುಂಕ ನಿವಾಸಿ ಶೇಷಾಚಲ ಭಟ್ಟ (61) ಎಂದು ಗುರುತಿಸಲಾಗಿದೆ.
ದೇವಸ್ಥಾನದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದ ಸಿದ್ಧತೆಗಾಗಿ ಶೇಷಾಚಲ ಭಟ್ಟ ಅವರು ಮನೆಯಿಂದ ಸ್ಕೂಟಿಯಲ್ಲಿ ದೇವಸ್ಥಾನದತ್ತ ತೆರಳುತ್ತಿದ್ದರು. ಕರಿಗಲ್ಲು ಗ್ರಾಮದ ಬಳಿ ಸಾಗುತ್ತಿದ್ದಾಗ ಸ್ಕೂಟಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ.
ಘಟನೆಯನ್ನು ಪ್ರತ್ಯಕ್ಷವಾಗಿ ಕಂಡವರು ಯಾರೂ ಇಲ್ಲ. ಅಪಘಾತ ಸಂಭವಿಸಿದ ಸ್ಥಳವು ತಿರುವಿನಿಂದ ಕೂಡಿದ್ದು, ಮಳೆಯ ಕಾರಣ ರಸ್ತೆ ಜಾರುವಂತಾಗಿದ್ದರಿಂದ ಸ್ಕೂಟಿ ಸ್ಕಿಡ್ ಆಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಅಪಘಾತದಲ್ಲಿ ಶೇಷಾಚಲ ಭಟ್ಟ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಘಟನೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
