ಮಳೆಯ ತವರೂರಲ್ಲಿ ಮಳೆ ಕೈಕೊಟ್ಟಿದೆ! ಹೊಸನಗರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹ | JDS leaders and workers staged a protest in Hosanagara demanding that the Karnataka government declare Hosanagara taluk drought-hit and provide immediate relief to farmers and residents.
ಹೊಸನಗರ: ಮಲೆನಾಡಿನ ತವರೂರು ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ತಾಲೂಕು ಎಂಬ ಹೆಗ್ಗಳಿಕೆ ಹೊಂದಿರುವ ಹೊಸನಗರದಲ್ಲಿ ಈ ಬಾರಿ ಮಳೆ ಪ್ರಮಾಣದಲ್ಲಿ ಭಾರೀ ಕುಸಿತ ಉಂಟಾಗಿದ್ದು, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ತಾಲೂಕು ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯ ಸರ್ಕಾರ ತಕ್ಷಣ ಹೊಸನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ತುರ್ತು ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಳಿಕ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎ. ಚಾಬುಸಾಬ್, ಹೊಸನಗರ ತಾಲೂಕಿನಲ್ಲಿ ಸಾಮಾನ್ಯವಾಗಿ ಉತ್ತಮ ಮಳೆಯಾಗುತ್ತಿದ್ದರೂ ಈ ವರ್ಷ ಮಳೆ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆಯಾಗಿದೆ. ಇದರಿಂದ ರೈತರು ಹಾಗೂ ಗ್ರಾಮೀಣ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಚಟುವಟಿಕೆಗಳ ಮೇಲೂ ಬರದ ಪರಿಣಾಮ ಉಂಟಾಗಿದೆ ಎಂದು ಹೇಳಿದರು.
ಸರ್ಕಾರ ವಿಳಂಬ ಮಾಡದೆ ಹೊಸನಗರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಕುಡಿಯುವ ನೀರು ಮತ್ತು ಮೇವು ಪೂರೈಕೆ, ವೈಜ್ಞಾನಿಕ ಬೆಳೆ ಹಾನಿ ಸಮೀಕ್ಷೆ ಹಾಗೂ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾ ಮುಖಂಡ ಎಂ.ವಿ. ಜಯರಾಮ್ ಮಾತನಾಡಿ, ಮಳೆ ಕೊರತೆಯಿಂದ ರೈತರ ಕೃಷಿ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. ಬೆಳೆ ಹಾನಿಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿ ಅರ್ಹ ರೈತರಿಗೆ ತ್ವರಿತವಾಗಿ ಪರಿಹಾರ ನೀಡಬೇಕು. ಬರಪೀಡಿತ ಪ್ರದೇಶಗಳಲ್ಲಿ ಅಲ್ಪಾವಧಿಯ ಬೆಳೆಗಳನ್ನು ಬೆಳೆಯಲು ರೈತರಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿದರು.
ಹೊಸನಗರ ತಾಲೂಕಿಗೆ ತುರ್ತು ಬರ ಪರಿಹಾರ ಕಾಮಗಾರಿಗಳನ್ನು ಕೈಗೊಂಡು ಜನರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಾಲಪ್ಪಗೌಡ, ಷಣ್ಮುಖ, ಕೆ.ಆರ್. ವಿಶ್ವನಾಥ್, ರಾಜೇಂದ್ರಗೌಡ, ಸುಮತಿ ಪೂಜಾರಿ, ಉಮೇಶ್, ಚಂದ್ರಣ್ಣ, ಫಾರೂಕ್, ಮಲ್ಲೇಶ್, ವೀರಪ್ಪ ಕಲ್ಲುಗುಡ್ಡೆ, ವಿಶ್ವನಾಥ್, ರಘು ಪೂಜಾರಿ, ಕಾಯಿ ನಾಗೇಶ್, ಹಾಲುಗುಡ್ಡೆ ಹರೀಶ್, ಆನೆಗದ್ದೆ ವೀರೇಶ್, ಮಲ್ಲೇಶಪ್ಪ, ದೇವರಾಜ, ನಟರಾಜ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
































