ಬಂದೋಬಸ್ತ್ ಕರ್ತವ್ಯದ ನಡುವೆ ವಾತ್ಸಲ್ಯದ ತುತ್ತು: ಸಿಬ್ಬಂದಿಗೆ ಬಾಳೆ ಎಲೆಯ ‘ಹೋಳಿಗೆ ಊಟ’ ಬಡಿಸಿ ಮಾದರಿಯಾದ ಅಧಿಕಾರಿಗಳು! | Police personnel deployed for Ganeshotsava security in Ripponpete were served a traditional banana-leaf meal by senior police officers, highlighting their care and appreciation for the staff.
ರಿಪ್ಪನ್ ಪೇಟೆ : ಗಣೇಶೋತ್ಸವ ಬಂತೆಂದರೆ ಎಲ್ಲೆಡೆ ಸಂಭ್ರಮ, ಸಡಗರ. ಆದರೆ ಈ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ಹಬ್ಬ ಆಚರಿಸಲು ಹಗಲಿರುಳು ರಸ್ತೆಯಲ್ಲಿ ನಿಂತು ಶ್ರಮಿಸುವ ಪೊಲೀಸ್ ಸಿಬ್ಬಂದಿಯ ಸೇವೆ ಬೆಲೆಕಟ್ಟಲಾಗದ್ದು. ಇಂತಹ ಬಿಡುವಿಲ್ಲದ ಬಂದೋಬಸ್ತ್ ಕರ್ತವ್ಯದ ನಡುವೆ ಬಹುತೇಕ ಕಡೆಗಳಲ್ಲಿ ಪೊಲೀಸರಿಗೆ ಫುಡ್ ಪ್ಯಾಕೆಟ್ ಅಥವಾ ಸಾಮಾನ್ಯ ಊಟದ ವ್ಯವಸ್ಥೆ ಮಾಡುವುದು ವಾಡಿಕೆ. ಆದರೆ ರಿಪ್ಪನ್ ಪೇಟೆ ಗಣೇಶೋತ್ಸವದಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಬಗ್ಗೆ ತೋರಿದ ವಿಶೇಷ ಕಾಳಜಿ ಎಲ್ಲರ ಹೃದಯ ಗೆದ್ದಿದೆ.
ಹೌದು, ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್‌ಪಿ ಭಾನುಪ್ರಕಾಶ್ ಹಾಗೂ ಸಿಪಿಐ ಗೌಡಪ್ಪ ಗೌಡ , ಪಿಎಸ್ ಐ ರಾಜು ರೆಡ್ಡಿ ಅವರ ನೇತೃತ್ವದಲ್ಲಿ ಗಣೇಶೋತ್ಸವ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಅತ್ಯುತ್ತಮವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಕೇವಲ ಊಟದ ಪೊಟ್ಟಣಗಳನ್ನು ನೀಡದೆ, ಸಾಂಪ್ರದಾಯಿಕವಾಗಿ ‘ಬಾಳೆ ಎಲೆಯಲ್ಲಿ ರುಚಿಯಾದ ಹೋಳಿಗೆ ಊಟ’ವನ್ನು ಉಣಬಡಿಸುವ ಮೂಲಕ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಯ ಮೇಲಿನ ಪ್ರೀತಿ ಹಾಗೂ ಕಾಳಜಿಯನ್ನು ಮೆರೆದಿದ್ದಾರೆ.
ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ನಿಂತು ಅವಸರದಲ್ಲಿ ಪ್ಯಾಕೆಟ್ ಊಟ ಮಾಡುವ ಪೊಲೀಸರಿಗೆ, ಹಬ್ಬದ ದಿನದಂದು ಮನೆಯ ಊಟದಷ್ಟೇ ಅಚ್ಚುಕಟ್ಟಾದ ಭೋಜನ ಸವಿದ ಸಂತಸ ಮೂಡಿದೆ. ಹಿರಿಯ ಅಧಿಕಾರಿಗಳ ಈ ವಿಶೇಷ ಆಸಕ್ತಿ ಮತ್ತು ಮಾನವೀಯ ಸ್ಪರ್ಶ ಕೇವಲ ಸಿಬ್ಬಂದಿಯ ಹೊಟ್ಟೆ ತುಂಬಿಸಿದ್ದಲ್ಲದೆ, ಅವರ ನೈತಿಕ ಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಅಧಿಕಾರದ ಗಡಿಯಾಚೆಗೆ ನಿಂತು, ತಮ್ಮ ಕೈಕೆಳಗೆ ದುಡಿಯುವ ಸಿಬ್ಬಂದಿಯನ್ನು ಒಂದು ಕುಟುಂಬದಂತೆ ಕಂಡು ವಾತ್ಸಲ್ಯ ಮೆರೆದ ಈ ಅಧಿಕಾರಿಗಳ ಕಾರ್ಯ ಪೊಲೀಸ್ ಇಲಾಖೆಗೆ ಮಾತ್ರವಲ್ಲ, ಇಡೀ ಸಮಾಜಕ್ಕೇ ಒಂದು ಸುಂದರ ಪ್ರೇರಣೆ.
ರಿಪ್ಪನ್‌ಪೇಟೆ | ಗಣೇಶೋತ್ಸವದ ಹಿನ್ನೆಲೆ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪರೇಡ್

ಡಿವೈಎಸ್ಪಿ ಭಾನು ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯಿಂದ ಪಥಸಂಚಲನ
ರಿಪ್ಪನ್‌ಪೇಟೆ: ಗಣೇಶೋತ್ಸವ ಹಾಗೂ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದೆ. ಇದರ ಭಾಗವಾಗಿ ಡಿವೈಎಸ್ಪಿ ಭಾನು ಪ್ರಕಾಶ್ ಅವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ನಾಲ್ಕು ರಸ್ತೆಗಳಲ್ಲಿ ಪೊಲೀಸ್ ಪರೇಡ್ ನಡೆಸಲಾಯಿತು.
ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿ, ಸಾರ್ವಜನಿಕರಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿದರು.
ಮೆರವಣಿಗೆ ಸಾಗುವ ಮಾರ್ಗ, ಪ್ರಮುಖ ವೃತ್ತಗಳು ಹಾಗೂ ಜನಸಂದಣಿ ಹೆಚ್ಚಾಗುವ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಸಂಚಾರ ವ್ಯವಸ್ಥೆ ಸುಗಮವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಗಣೇಶೋತ್ಸವವನ್ನು ಶಾಂತಿಯುತವಾಗಿ ನಡೆಸಲು ಸಾರ್ವಜನಿಕರು ಹಾಗೂ ಉತ್ಸವ ಆಯೋಜಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.