ಆಚರಣೆಗಳು ಸಂಸ್ಕಾರ ಮತ್ತು ಸಂಸ್ಕೃತಿಯ ಬಹುಮುಖ್ಯ ಭಾಗ : ಶ್ರೀ ಶ್ರೀ ಕುಮಾರ ದೇವರು
ಕೋಡೂರಿನಲ್ಲಿ ಕೃಷ್ಣ ವೇಷ ಸ್ಪರ್ಧೆಯಲ್ಲಿ ಮೇಳೈಸಿದ ಭಾರತೀಯ ಸಂಸ್ಕೃತಿಯ ಸೊಗಡು
ಕೊಡೂರು: ಪುರಾತನ ಆಚಾರ, ವಿಚಾರ ಹಾಗೂ ಆಚರಣೆಗಳು ಭಾರತೀಯರ ಬದುಕಿನ ಸಂಸ್ಕಾರ ಮತ್ತು ಸಂಸ್ಕೃತಿಯ ಬಹುಮುಖ್ಯ ಭಾಗವಾಗಿವೆ ಎಂದು ಬಟ್ಟೆಮಲ್ಲಪ್ಪದ ವ್ಯಾಸ ಮಹರ್ಷಿ ಗುರುಕುಲ ಆಶ್ರಮದ ಕುಮಾರ ದೇವರು ಹೇಳಿದರು.
ಬ್ಲಾಸಂ ಅಕಾಡೆಮಿ ಕೊಡೂರು ಹಾಗೂ ವ್ಯಾಸ ಮಹರ್ಷಿ ಗುರುಕುಲಾಶ್ರಮ ಬಟ್ಟೆಮಲ್ಲಪ್ಪದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಶ್ರೀಕೃಷ್ಣ ಲೀಲಾ ವೈಭವ’ ಮಕ್ಕಳ ಶ್ರೀಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿ ಆಧುನಿಕತೆಯ ಹೆಸರಿನಲ್ಲಿ ಪುರಾತನ ಆಚರಣೆಗಳು ಹಾಗೂ ಹಬ್ಬ-ಹರಿದಿನಗಳನ್ನು ಕಡೆಗಣಿಸುವ ಮನಸ್ಥಿತಿ ಯುವಜನತೆ ಹಾಗೂ ಪೋಷಕರಲ್ಲಿ ಹೆಚ್ಚುತ್ತಿದೆ. ಇದರಿಂದ ಮಕ್ಕಳಿಗೆ ಅಗತ್ಯವಾದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವುದು ಕಷ್ಟವಾಗುತ್ತಿದೆ ಎಂದು ಅವರು ವಿಷಾದಿಸಿದರು.
ಭಾರತೀಯ ಋಷಿ ಪರಂಪರೆಯಿಂದ ಆರಂಭಗೊಂಡು ಪುರಾಣ ಹಾಗೂ ಪುಣ್ಯಕಥೆಗಳ ಮೂಲಕ ಬಂದಿರುವ ಹಲವು ವಿಚಾರಗಳಿಗೆ ವೈಜ್ಞಾನಿಕ ಹಿನ್ನೆಲೆಯೂ ಇದೆ. ಆದರೆ ಅವುಗಳನ್ನು ಪ್ರಶ್ನಿಸುವ ಹಾಗೂ ಅಲ್ಲಗಳೆಯುವ ಮನೋಭಾವ ಹೆಚ್ಚುತ್ತಿರುವುದು ವಿಷಾದನೀಯ ಎಂದರು.
ಜನ್ಮಾಷ್ಟಮಿಯಂತಹ ಹಬ್ಬ-ಹರಿದಿನಗಳು, ಆಚಾರ-ವಿಚಾರಗಳು ಹಾಗೂ ಪರಿಸರದ ಕುರಿತ ಪಾಠಗಳ ಮೂಲಕ ಮಕ್ಕಳಿಗೆ ಭಾರತೀಯ ಪರಂಪರೆಯ ಮಹತ್ವವನ್ನು ತಿಳಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಕುಮಾರ ದೇವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಸುಮಂತ್ ಕೋಹಿಮಾ, ಮಕ್ಕಳ ಶಿಕ್ಷಣ ಮೊಬೈಲ್ಗಳ ಮೇಲೆ ಹೆಚ್ಚು ಅವಲಂಬಿತವಾಗುತ್ತಿರುವುದು ಅಪಾಯಕಾರಿ. ಕಲೆ, ಸಾಹಿತ್ಯ, ನಾಟಕ, ಸಂಗೀತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗ ಗಂಗೋತ್ರಿ ಪಿಯು ಕಾಲೇಜಿನ ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ಜಗದೀಶ್ ಸಂಪಳ್ಳಿ ಮಾತನಾಡಿ, ಮಕ್ಕಳಿಗೆ ಕಷ್ಟಗಳ ಅನುಭವವಾಗದಂತೆ ಬೆಳೆಸುವ ಪೋಷಕರ ಮನಸ್ಥಿತಿ ಭವಿಷ್ಯದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ಮಕ್ಕಳಿಗೆ ಸುಖ-ದುಃಖಗಳ ಅನುಭವವನ್ನು ಸಮತೋಲನದಿಂದ ನೀಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಎಂ.ಎಸ್. ಪಾಟೀಲ್ ಮಾತನಾಡಿ, ಶಾಲೆಗೆ ಶುಲ್ಕ ಪಾವತಿಸುವುದರಿಂದ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳನ್ನು ಜವಾಬ್ದಾರಿಯುತವಾಗಿ ಬೆಳೆಸುವಲ್ಲಿ ಶಿಕ್ಷಕರು ಮತ್ತು ಪೋಷಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಮಹೇಶ್, ತೀರ್ಪುಗಾರರಾದ ಎ.ಆರ್. ಗಣಪತಿ ಭಟ್ ಪುರಪ್ಪೆಮನೆ, ಉಷಾರಾಣಿ, ಅಶ್ವಿನಿ ಪಂಡಿತ್, ಸಂಗೀತ ಗುರು ಮಾಧುರಿ ದೇವಾನಂದ್, ಕಲಾವಿದ ನೀಲ್, ಡ್ರಾಮಾ ಜೂನಿಯರ್ ಖ್ಯಾತಿಯ ಪ್ರಣಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಥಾಮಸ್ ವಹಿಸಿದ್ದರು.
ಸಂಸ್ಥೆಯ ಆಡಳಿತ ಅಧಿಕಾರಿ ಮಂಜುನಾಥ್ ಬ್ಯಾಣದ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಶ್ವಿನಿ ಪ್ರಾರ್ಥಿಸಿದರು. ಉಪ ಪ್ರಾಚಾರ್ಯ ಪ್ರಕಾಶ್ ವಂದಿಸಿದರು.
ತಾಲೂಕಿನ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಮಕ್ಕಳು ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವ್ಯಾಸ ಮಹರ್ಷಿ ಗುರುಕುಲಾಶ್ರಮ, ಬ್ಲಾಸಂ ಅಕಾಡೆಮಿ ಸೇರಿದಂತೆ ಹಲವು ಸಂಘಟನೆಗಳು ಹಾಗೂ ಸಂಸ್ಥೆಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವು.