
ಬಸ್-ಬೈಕ್ ಭೀಕರ ಅಪಘಾತ; 27 ವರ್ಷದ ಮೆಕ್ಯಾನಿಕ್ ಸ್ಥಳದಲ್ಲೇ ಸಾವು
A 27-year-old mechanic was killed in a tragic bus and bike collision near Unturkatte Kaimara in Thirthahalli taluk of Shivamogga district.
ತೀರ್ಥಹಳ್ಳಿ: ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 27 ವರ್ಷದ ಮೆಕ್ಯಾನಿಕ್ ಯುವಕ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಉಂಟೂರುಕಟ್ಟೆ ಕೈಮರ ಸಮೀಪ ನಡೆದಿದೆ.
ಮೃತ ಯುವಕನನ್ನು ತೀರ್ಥಹಳ್ಳಿ ತಾಲೂಕಿನ ಗುತ್ತಿಯಡೆಹಳ್ಳಿ ಅಂಚೆ ವ್ಯಾಪ್ತಿಯ ಹಳ್ಳಿಬೈಲು ಶೇಡ್ಯಾರ್ ಗ್ರಾಮದ ನಿವಾಸಿ ಆರ್.ಎನ್. ದೇವರಾಜ್ ಅವರ ಪುತ್ರ ಗಣೇಶ್ (27) ಎಂದು ಗುರುತಿಸಲಾಗಿದೆ. ಗಣೇಶ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.
ಪೊಲೀಸ್ ವರದಿಯ ಪ್ರಕಾರ, ಗಣೇಶ್ ಅವರು ಸೆಪ್ಟೆಂಬರ್ 6ರಂದು ಸಂಜೆ ತಮ್ಮ ಪತ್ನಿಯ ತವರು ಮನೆಯಾದ ಕಾರ್ಕಳಕ್ಕೆ ತೆರಳಲು ಕೆಎ-14-ಇಎಫ್-0851 ನೋಂದಣಿ ಸಂಖ್ಯೆಯ ಟಿವಿಎಸ್ ಫಿನಿಕ್ಸ್ ಬೈಕ್‌ನಲ್ಲಿ ತೀರ್ಥಹಳ್ಳಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು.
ಸಂಜೆ ಸುಮಾರು 5.45ರ ವೇಳೆಗೆ ಮುಳುಬಾಗಿಲು ಗ್ರಾಮದ ಉಂಟೂರುಕಟ್ಟೆ ಕೈಮರ ಸಮೀಪ ಆಗುಂಬೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಎದುರಿನಿಂದ ಬಂದ ಕೆಎ-14-ಜಿ-1747 ನೋಂದಣಿ ಸಂಖ್ಯೆಯ ಗಣೇಶ್ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಣೇಶ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ನಂತರ ಸ್ಥಳೀಯರು ಗಣೇಶ್ ಅವರನ್ನು ತಕ್ಷಣ ತೀರ್ಥಹಳ್ಳಿಯ ಎಸ್‌ಜೆಸಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿದ ವೇಳೆ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.