ಈದ್ ಮಿಲಾದ್ ಮೆರವಣಿಗೆ: ಪಾನೀಯ, ಕೇಕ್ ವಿತರಿಸಿ ಸೌಹಾರ್ದತೆ ಮೆರೆದ ಹಿಂದೂ ಸಂಘಟನೆ ಕಾರ್ಯಕರ್ತರು
Hindu organisation workers distributed cold drinks and cake to participants of the Eid Milad procession in Ripponpete, spreading a message of communal harmony and brotherhood.
ರಿಪ್ಪನ್ ಪೇಟೆ : ಬಾಳಿನ ದಾರಿಯಲ್ಲಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂಬ ಹಿರಿಯರ ಆಶಯಕ್ಕೆ ಕನ್ನಡಿ ಹಿಡಿದಂತಹ ಅತ್ಯಂತ ಭಾವುಕ ಹಾಗೂ ಸ್ಪೂರ್ತಿದಾಯಕ ಘಟನೆಗೆ ರಿಪ್ಪನ್ಪೇಟೆ ಸಾಕ್ಷಿಯಾಗಿದೆ. ದ್ವೇಷದ ಕಿಡಿಗಳನ್ನು ಹತ್ತಿಸುವವರೇ ಹೆಚ್ಚಾಗಿರುವ ಪ್ರಸ್ತುತ ಸಮಾಜದಲ್ಲಿ, ಮನುಷ್ಯತ್ವದ ತೇವ ಇನ್ನೂ ಆರಿಲ್ಲ ಎಂಬುದನ್ನು ಇಲ್ಲಿನ ಹಿಂದೂ ಸಂಘಟನೆಯ ಯುವಕರು ತಮ್ಮ ನಿಸ್ವಾರ್ಥ ನಡೆಯ ಮೂಲಕ ಇಡೀ ನಾಡಿಗೆ ಸಾರಿ ಹೇಳಿದ್ದಾರೆ.
ಇಂದು ಕರುಣಾಮಯಿ ಪ್ರವಾದಿ ಮುಹಮ್ಮದ್ ಪೈಗಂಬರರ 1501ನೇ ಜನ್ಮ ದಿನಾಚರಣೆ. ಈ ಪ್ರಯುಕ್ತ ಮುಸ್ಲಿಂ ಬಾಂಧವರು ಅತ್ಯಂತ ಭಕ್ತಿ-ಭಾವಗಳಿಂದ ಏರ್ಪಡಿಸಿದ್ದ ‘ಈದ್ ಮಿಲಾದ್’ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿತ್ತು. ಮೆರವಣಿಗೆಯು ವಿನಾಯಕ ವೃತ್ತದ ಬಳಿ ಆಗಮಿಸುತ್ತಿದ್ದಂತೆ, ಅಲ್ಲಿಯವರೆಗೂ ಮೆರವಣಿಗೆಯಲ್ಲಿದ್ದ ಮುಸ್ಲಿಂ ಬಾಂಧವರಿಗೆ ಕಾದಿದ್ದು ಒಂದು ಅನಿರೀಕ್ಷಿತ ಹಾಗೂ ಹೃದಯಸ್ಪರ್ಶಿ ಸ್ವಾಗತ. ಧರ್ಮದ ಗಡಿಗಳನ್ನು ಮೀರಿದ ಹಿಂದೂ ಸಂಘಟನೆಯ ಕಾರ್ಯಕರ್ತರು, ತಮ್ಮ ಮುಸ್ಲಿಂ ಸಹೋದರರಿಗಾಗಿ ಪ್ರೀತಿಯಿಂದ ತಂಪು ಪಾನೀಯ ಹಾಗೂ ಕೇಕ್ ಹಿಡಿದು ನಿಂತಿದ್ದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಹಾಗೂ ರಸ್ತೆಯ ಬದಿಯಲ್ಲಿ ನಿಂತು ಸಂಭ್ರಮ ವೀಕ್ಷಿಸುತ್ತಿದ್ದ ಮಹಿಳೆಯರಿಗೂ ಹಿಂದೂ ಯುವಕರು ಸ್ವತಃ ತಮ್ಮ ಕೈಯಾರೆ ಸಿಹಿ ಮತ್ತು ಪಾನೀಯ ನೀಡಿ ಸತ್ಕರಿಸಿದರು. ಹೊಸನಗರ ಸಿಪಿಐ ಗೌಡಪ್ಪಗೌಡರ್ ಅವರು ಈ ಅಭೂತಪೂರ್ವ ಮಾನವೀಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಈ ಸೌಹಾರ್ದತೆಯ ಬೆಸುಗೆಗೆ ಮೆರುಗು ತಂದರು.
ಬಾಯಾರಿದ ಗಂಟಲಿಗೆ ತಂಪು ಪಾನೀಯ ನೀಡಿದ ಹಿಂದೂ ಬಾಂಧವರ ಈ ಅಪ್ಪಟ ಪ್ರೀತಿಯನ್ನು ಕಂಡು ಮುಸ್ಲಿಂ ಬಾಂಧವರು ಅಕ್ಷರಶಃ ಭಾವುಕರಾದರು. ಹಿಂದೂ ಯುವಕರ ಕೈಕುಲುಕಿ, ಹೃದಯಪೂರ್ವಕವಾಗಿ ಆಲಂಗಿಸಿ, ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ಆ ಸುಂದರ ಕ್ಷಣ, “ಧರ್ಮ ಯಾವುದಾದರೂ ನಾವೆಲ್ಲರೂ ಭಾರತೀಯರು” ಎಂಬ ಸಂದೇಶ ಅಲ್ಲಿ ಮಾರ್ದನಿಸುತ್ತಿತ್ತು.
ಈ ಅಪರೂಪದ ಭಾವೈಕ್ಯತೆಯ ಕೂಟದಲ್ಲಿ ನಿಕಟಪೂರ್ವ ಗ್ರಾ.ಪಂ. ಸದಸ್ಯ ನಿರೂಪ್ ಕುಮಾರ್, ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ , ಪಿಎಸ್ ಐ ರಾಜು ರೆಡ್ಡಿ , ಶಿವಾನಂದ ಕೆ , ಪ್ರಮುಖರಾದ ಅರ್ ಎ ಚಾಬುಸಾಬ್ , ಅಮೀರ್ ಹಂಜಾ , ಆಸೀಫ್ ಭಾಷಾ , ಪ್ರವೀಣ್ ಆಚಾರ್, ಶರತ್ ಕುಮಾರ್, ಚಿದಾನಂದ್, ಶೀಲಾ ಆರ್.ಡಿ, ವರುಣ್ ಕುಮಾರ್, ನಿಸಾರ್ ಸುಮಯ್ಯ , ಅಕ್ಬರ್ , ಸುದೇಶ್ ಆರ್.ಡಿ, ಹರ್ಷ ಕಾಶೀನಾಥ್, ಪ್ರಮೋದ್, ಹಾಗೂ ಮಂಜಣ್ಣ ಶಾಮಿಯಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಪ್ರೀತಿಯ ದೂತರಾದರು.
ಇದು ಕೇವಲ ಒಂದು ದಿನದ ಆಚರಣೆಯಲ್ಲ; ನಾಡಿನ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಜಾತ್ಯತೀತ ಮನೋಭಾವದ ನೈಜ ಅನಾವರಣ. ಇಂತಹ ಹೃದಯಗಳ ಮಿಲನ ಸಮಾಜಕ್ಕೆ ಅತ್ಯಂತ ದೊಡ್ಡ ಸ್ಪೂರ್ತಿಯಾಗಿದ್ದು, ಈ ಸೌಹಾರ್ದತೆಯ ಘಮಲು ನಾಡಿನೆಲ್ಲೆಡೆ ಪಸರಿಸಲಿ.