ನೀರಿನಲ್ಲಿ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನ ; ಸಿನಿಮೀಯ ರೀತಿಯಲ್ಲಿ ರೌಡಿಶೀಟರ್‌ನನ್ನು ಬಂಧಿಸಿದ ಪೊಲೀಸರು
Bhadravathi police dramatically arrested rowdy-sheeter Dilip alias Kariya, who was hiding underwater in a stream to evade arrest. He faces 16 criminal cases.
ಭದ್ರಾವತಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳ್ಳದ ನೀರಿನ ಅಡಿಯಲ್ಲಿ ಅಡಗಿ ಕುಳಿತಿದ್ದ ರೌಡಿಶೀಟರ್‌ನನ್ನು ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆಹಚ್ಚಿ ಬಂಧಿಸಿರುವ ಘಟನೆ ನಡೆದಿದೆ.
ಬಂಧಿತನನ್ನು ಭದ್ರಾವತಿಯ ರೌಡಿಶೀಟರ್ ದಿಲೀಪ್ ಅಲಿಯಾಸ್ ಕರಿಯಾ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ವಿರುದ್ಧ ನ್ಯಾಯಾಲಯದಿಂದ ಮೂರು ಬಾರಿ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲು ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಬುಧವಾರ ಕಾರ್ಯಾಚರಣೆ ನಡೆಸಿದ್ದರು.
ಪೊಲೀಸರು ತನ್ನನ್ನು ಬಂಧಿಸಲು ಬರುತ್ತಿರುವ ವಿಷಯ ತಿಳಿದ ದಿಲೀಪ್ ಪರಾರಿಯಾಗಿದ್ದನು. ಈತ ಭಂಡಾರಹಳ್ಳಿ ಸಮೀಪದ ಹಳ್ಳದ ಬಳಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಸುತ್ತಮುತ್ತ ವ್ಯಾಪಕ ಹುಡುಕಾಟ ನಡೆಸಿದರು.
ಆದರೆ ದಿಲೀಪ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇದೇ ವೇಳೆ ಹಳ್ಳದ ನೀರಿನಲ್ಲಿ ಕಳೆ ಹಾಗೂ ನೀರಿನ ಚಲನವಲನದಲ್ಲಿ ಅನುಮಾನ ಕಂಡುಬಂದಿದೆ. ತಕ್ಷಣ ನ್ಯೂ ಟೌನ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ಪ್ರಸನ್ನ ಹಳ್ಳಕ್ಕೆ ಇಳಿದು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನೀರಿನ ಅಡಿಯಿಂದ ಗುಳ್ಳೆಗಳು ಮೇಲಕ್ಕೆ ಬರುತ್ತಿರುವುದನ್ನು ಗಮನಿಸಿದ ಪೊಲೀಸರು ಸ್ಥಳವನ್ನು ಸುತ್ತುವರಿದರು. ಬಳಿಕ ನೀರಿನ ಅಡಿಯಲ್ಲಿ ಅಡಗಿ ಕುಳಿತಿದ್ದ ದಿಲೀಪ್ ಅಲಿಯಾಸ್ ಕರಿಯಾನನ್ನು ಸಿನಿಮೀಯ ರೀತಿಯಲ್ಲಿ ಹಿಡಿದು ಬಂಧಿಸಿದರು.
ಹಳ್ಳದಲ್ಲಿಯೇ ಆರೋಪಿಯ ಕೈಗೆ ಕೋಳ ತೊಡಿಸಿದ ಪೊಲೀಸರು ಬಳಿಕ ಆತನನ್ನು ದಂಡೆಗೆ ಕರೆತಂದರು. ರೌಡಿಶೀಟರ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಡಿದ ಯತ್ನ ವಿಫಲವಾಗಿದ್ದು, ನ್ಯೂ ಟೌನ್ ಠಾಣೆ ಪೊಲೀಸರ ಚಾಕಚಕ್ಯ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.