ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ – ಕೆರೆಗೆ ಹಾರಿ ಸಾಗರದ ಯುವತಿ

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ – ಕೆರೆಗೆ ಹಾರಿ ಸಾಗರದ ಯುವತಿ

A 22-year-old woman from Sagara allegedly died by suicide after harassment and blackmail by a youth in Bengaluru. HSR Layout police have registered a case and are investigating.

ಬೆಂಗಳೂರು: ಯುವಕನೊಬ್ಬನ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತು ಸಾಗರ ಮೂಲದ 22 ವರ್ಷದ ಯುವತಿ ಬೆಂಗಳೂರಿನ ಅಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ಯುವತಿಯನ್ನು ಸಾಗರ ತಾಲೂಕಿನ ಬೆಳಲಮಕ್ಕಿ ಸಮೀಪದ ಅರೋಡಿ ನಿವಾಸಿ ವಾಣಿಶ್ರೀ ಎಂದು ಗುರುತಿಸಲಾಗಿದೆ.

ವಾಣಿಶ್ರೀ ಅವರು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್-1ರ ಪೇಯಿಂಗ್ ಗೆಸ್ಟ್ (PG) ವಸತಿಗೃಹದಲ್ಲಿ ವಾಸವಾಗಿದ್ದು, ಅದೇ ಪ್ರದೇಶದ ಆಭರಣ ಮಳಿಗೆಯೊಂದರಲ್ಲಿ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್ ಎಂಬ ವ್ಯಕ್ತಿ ತಮಗೆ ಕಿರುಕುಳ ನೀಡುತ್ತಿದ್ದು, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ವಾಣಿಶ್ರೀ ಅವರು ಪತ್ರವೊಂದನ್ನು ಬರೆದಿಟ್ಟಿದ್ದರು ಎನ್ನಲಾಗಿದೆ.

ಆಗಸ್ಟ್ 22ರ ಬೆಳಗ್ಗೆ ವಾಣಿಶ್ರೀ ಅವರ ರೂಮ್‌ಮೇಟ್, ಆಕೆಯ ಸಹೋದರಿ ಪೂಜಾಗೆ ಈ ಪತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೂಜಾ ಹಾಗೂ ಪಿಜಿ ಮಾಲೀಕರು ವಾಣಿಶ್ರೀಗಾಗಿ ಹುಡುಕಾಟ ನಡೆಸಿದ್ದು, ನಂತರ ಎಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹಾಗೂ ಕುಟುಂಬಸ್ಥರು ಅಗರ ಕೆರೆ ಸುತ್ತಮುತ್ತ ಶೋಧ ನಡೆಸಿದಾಗ ವಾಣಿಶ್ರೀ ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂಜಾ ನೀಡಿದ ದೂರಿನ ಆಧಾರದ ಮೇಲೆ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಅಭಿಷೇಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 108ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನ ಪ್ರಕಾರ, ಅಭಿಷೇಕ್ ಕರೆಗಳು, ಸಂದೇಶಗಳು, ಫೋಟೊಗಳು ಹಾಗೂ ವಿಡಿಯೋಗಳ ಮೂಲಕ ವಾಣಿಶ್ರೀ ಅವರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ವಾಣಿಶ್ರೀ ಹಾಗೂ ಅಭಿಷೇಕ್ ಪರಸ್ಪರ ಪರಿಚಿತರಾಗಿದ್ದು, ಪಿಯುಸಿ ವ್ಯಾಸಂಗದ ವೇಳೆ ಇಬ್ಬರೂ ಒಟ್ಟಿಗೆ ಓದಿದ್ದರು ಎನ್ನಲಾಗಿದೆ. ಸಾಗರದಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ವಾಣಿಶ್ರೀ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದರು.

ಆರೋಪಗಳ ಕುರಿತು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author