ಕೆಂಚನಾಲದಲ್ಲಿ ಮನೆ ಮೇಲೆ ಉರುಳಿದ ತೆಂಗಿನ ಮರ : ತಪ್ಪಿದ ಭಾರಿ ಅನಾಹುತ – ಸಂತ್ರಸ್ತ ಕುಟುಂಬಕ್ಕೆ ಶಾಸಕರ ಸೂಚನೆಯಂತೆ ಪರಿಹಾರ

ಕೆಂಚನಾಲದಲ್ಲಿ ಮನೆ ಮೇಲೆ ಉರುಳಿದ ತೆಂಗಿನ ಮರ : ತಪ್ಪಿದ ಭಾರಿ ಅನಾಹುತ – ಸಂತ್ರಸ್ತ ಕುಟುಂಬಕ್ಕೆ ಶಾಸಕರ ಸೂಚನೆಯಂತೆ ಪರಿಹಾರ

Coconut tree fell on a poor family’s house at Gowdakoppa village in Kenchanala GP limits. No casualties were reported. Relief was provided following MLA Belur Gopalakrishna’s direction.

ಕೆಂಚನಾಲ: ಗಾಳಿಯ ಅಬ್ಬರಕ್ಕೆ ತೆಂಗಿನ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಘಟನೆ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗೌಡಕೊಪ್ಪ ಗ್ರಾಮದ ನಿವಾಸಿ ಗೌರಮ್ಮ ಕೋಂ ಮಂಜಪ್ಪ ಅವರ ಮನೆ ಮೇಲೆ ತೆಂಗಿನ ಮರ ಏಕಾಏಕಿ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಛಾವಣಿ ಸೇರಿದಂತೆ ಕೆಲ ಭಾಗಗಳಿಗೆ ಹಾನಿಯಾಗಿದ್ದು, ಬಡ ಕುಟುಂಬಕ್ಕೆ ಆತಂಕ ಎದುರಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯೊಳಗೆ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅಧಿಕಾರಿಗಳು ಹಾಗೂ ತಮ್ಮ ಸಿಬ್ಬಂದಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಶಾಸಕರ ಸೂಚನೆಯ ಮೇರೆಗೆ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಮನೆಗೆ ಉಂಟಾಗಿರುವ ಹಾನಿಯನ್ನು ಪರಿಶೀಲಿಸಿದ ಬಳಿಕ, ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಶಾಸಕರ ಸೂಚನೆಯಂತೆ ಗೌರಮ್ಮ ಅವರ ಕುಟುಂಬಕ್ಕೆ ವೈಯಕ್ತಿಕ ಪರಿಹಾರವನ್ನು ವಿತರಿಸಲಾಯಿತು.

ಇನ್ನು ಘಟನೆಯ ಕುರಿತು ಮಾಹಿತಿ ಪಡೆದ ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಹಾನಿ ಹಾಗೂ ಕುಟುಂಬಕ್ಕೆ ಉಂಟಾಗಿರುವ ನಷ್ಟದ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಮಾಜಿ ಅಧ್ಯಕ್ಷ ಉಬೇದುಲ್ಲಾ ಷರೀಫ್ , ಗೋಪಿ ಜಯನಗರ , ಫಾಜೀಲ್ ಹಾಗೂ ಇನ್ನಿತರರು ಇದ್ದರು.

About The Author