ಶಿವಮೊಗ್ಗ : ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ ಹರಿದು ಓರ್ವ ಬಾಲಕಿ ಮೃತಪಟ್ಟ ಘಟನೆ ತರೀಕೆರೆ ತಾಲ್ಲೂಕಿನಲ್ಲಿ ನಡೆದಿದೆ.
ಓವರ್ ಸ್ಪೀಡ್ ನಿಂದ ಕಂಟ್ರೋಲ್ ತಪ್ಪಿದ ಖಾಸಗಿ ಬಸ್ ವೊಂದುವಏಕಾಏಕಿ ಮಕ್ಕಳ ಮೇಲೆ ಹರಿದ ಘಟನೆ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ ನಲ್ಲಿ ನಡೆದಿದೆ.
ಘಟನೆಯಲ್ಲಿ ತುಳಸಿ (15) ನಿವೇದಿತ (14) ಎಂಬ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿತ್ತು. ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಉಳಿದ ಐವರು ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅದರೆ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ತುಳಸಿ ಮೃತಪಟ್ಟಿದ್ದಾಳೆ . ಆಸ್ಪತ್ರೆ ಬಳಿ ತುಳಸಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಏಕಾಏಕಿ ರಸ್ತೆ ಬದಿಯ ಬಸ್ ನಿಲ್ದಾಣ ಹಾಗೂ ಮನೆಗಳತ್ತ ಬಸ್ ನುಗ್ಗಿದ್ದು, ಡಿಕ್ಕಿ ರಭಸಕ್ಕೆ ಮನೆಯ ಮುಂಭಾಗದ ಮೇಲ್ಛಾವಣಿ ಸಂಪೂರ್ಣ ಜಖಂ ಆಗಿದೆ. ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಪ್ರಯಾಣಿಕರು ಚೆಲ್ಲಾಪಿಲ್ಲಿ ಆಗಿದ್ದಾರೆ. ಅಧಿಕ ವೇಗವಾಗಿ ಹೋಗುವ ಖಾಸಗಿ ಬಸ್ಗಳು ಹಾಗೂ ಚಾಲಕರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಬಸ್ಸಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.
ಸಾವನ್ನಪ್ಪಿದ ವಿದ್ಯಾರ್ಥಿನಿ ತುಳಸಿ ಬಾವಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ತುಳಸಿ ತರೀಕೆರೆ ತಾಲೂಕಿನ ಸೀತಾಪುರ ಕಾವಲು ನಿವಾಸಿ ಆಗಿದ್ದು, ಮಂಜು ಲತಾ ದಂಪತಿಯ ಪುತ್ರಿ ಆಗಿದ್ದಾಳೆ. ತುಳಸಿ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಪಘಾತವಾಗಿದ್ದಂತೆ ಖಾಸಗಿ ಬಸ್ ಚಾಲಕ ರಾಮು ಪರಾರಿಯಾಗಿದ್ದಾನೆ. ಬಸ್ ಚಾಲಕನಿಗಾಗಿ ತರೀಕೆರೆ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದು, ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.