ಪ್ರೇಮ ವಿವಾದ ದುರಂತ ಅಂತ್ಯ ; ನಾಡಬಾಂಬ್ ಸ್ಫೋಟಿಸಿಕೊಂಡು ಯುವಕ ಸಜೀವ ದಹನ, ಚಾಕು ಇರಿತದಿಂದ ಯುವತಿಗೆ ಗಾಯ
A tragic incident on NH-48 near Jogihalli ended with a youth allegedly detonating a country-made bomb inside a car after stabbing his girlfriend. The injured woman survived and police are investigating the case.
ತುಮಕೂರು : ಜಿಲ್ಲೆಯ ಶಿರಾ ತಾಲ್ಲೂಕಿನ ಜೋಗಿಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಶನಿವಾರ ನಡೆದ ಭೀಕರ ಘಟನೆಯಲ್ಲಿ ಯುವಕನೊಬ್ಬ ನಾಡಬಾಂಬ್ ಸ್ಫೋಟಿಸಿಕೊಂಡು ಸಜೀವ ದಹನಗೊಂಡಿದ್ದಾನೆ. ಮೃತನನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ನಾಗೇಂದ್ರ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿದ್ದ ರಮ್ಯಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಇದೇ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ರಮ್ಯಾ ಅವರು ಬೆಂಗಳೂರಿನ ಜಯನಗರ ವ್ಯಾಪ್ತಿಯ ಸಿದ್ದಾಪುರದಲ್ಲಿ ಸ್ನೇಹಿತೆಯೊಂದಿಗೆ ವಾಸವಾಗಿದ್ದರು. ಶನಿವಾರ ಬೆಳಿಗ್ಗೆ ನಾಗೇಂದ್ರ ಉಬರ್ ಕ್ಯಾಬ್ ಬುಕ್ ಮಾಡಿಕೊಂಡು ಸಿದ್ದಾಪುರಕ್ಕೆ ತೆರಳಿ, ರಮ್ಯಾರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಂಕೋಲಾ ಕಡೆಗೆ ಹೊರಟಿದ್ದಾನೆ ಎನ್ನಲಾಗಿದೆ. ಈ ಕುರಿತು ರಮ್ಯಾ ಸ್ನೇಹಿತೆಯರು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಕಾರು ಸಾಗುತ್ತಿದ್ದ ವೇಳೆ ಸಿದ್ದಾಪುರ ಪೊಲೀಸರು ಕಾರು ಚಾಲಕನನ್ನು ಸಂಪರ್ಕಿಸಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದರಿಂದ ಆತಂಕಗೊಂಡ ನಾಗೇಂದ್ರ, ಕಾರಿನಲ್ಲೇ ರಮ್ಯಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ರಮ್ಯಾ ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಚಾಲಕ ನಾಗೇಂದ್ರನಿಂದ ಚಾಕುವನ್ನು ಕಿತ್ತು ಹೊರಕ್ಕೆ ಎಸೆದಿದ್ದು, ಬಳಿಕ ಬ್ಯಾಗ್‌ನಲ್ಲಿದ್ದ ಒಂದು ನಾಡಬಾಂಬ್‌ನ್ನೂ ವಶಪಡಿಸಿಕೊಂಡು ದೂರಕ್ಕೆ ಎಸೆದಿದ್ದಾರೆ. ಆದರೂ ಕಾರಿನಿಂದ ಕೆಳಗಿಳಿಯಲು ನಾಗೇಂದ್ರ ನಿರಾಕರಿಸಿದ್ದಾನೆ.
‘ಬಾಂಬ್ ತಂದಿದ್ದಾನೆ, ದೂರ ಓಡಿ’ ಎಂದು ರಮ್ಯಾ ಕೂಗಿದ ನಂತರ ಚಾಲಕ ಅಲ್ಲಿಂದ ದೂರ ಸರಿದಿದ್ದಾರೆ. ಇದೇ ವೇಳೆ ನಾಗೇಂದ್ರ ತನ್ನ ಬಳಿ ಇದ್ದ ಮತ್ತೊಂದು ನಾಡಬಾಂಬ್‌ಗೆ ಲೈಟರ್‌ನಿಂದ ಬೆಂಕಿ ಹಚ್ಚಿ ಸ್ಫೋಟಿಸಿಕೊಂಡಿದ್ದು, ಸ್ಫೋಟದ ತೀವ್ರತೆಗೆ ಕಾರಿನೊಳಗೇ ಸಜೀವ ದಹನಗೊಂಡಿದ್ದಾನೆ.
ಚಾಕು ಇರಿತದಿಂದ ತಲೆ ಹಾಗೂ ಕೈಗೆ ಗಾಯಗೊಂಡಿರುವ ರಮ್ಯಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.