ಪ್ರಿಯಕರನ ಕ್ರೌರ್ಯಕ್ಕೆ ಬಲಿಯಾದ 20 ವರ್ಷದ ಯುವತಿ: ಲಿವಿಂಗ್-ಟು-ಗೆದರ್ ಸಂಬಂಧ ದುರಂತ ಅಂತ್ಯ
A 20-year-old woman was allegedly strangled to death by her live-in partner in Bengaluru after an argument over her plan to visit her hometown. Police have arrested the accused and launched an investigation.
ಬೆಂಗಳೂರು, ಜೂ.17: ಲಿವಿಂಗ್-ಟು-ಗೆದರ್ ಸಂಬಂಧದಲ್ಲಿದ್ದ ಪ್ರೇಯಸಿ ಊರಿಗೆ ಹೋಗಿ ಬರುವುದಾಗಿ ತಿಳಿಸಿದ್ದಕ್ಕೆ ಕೋಪಗೊಂಡ ಪ್ರಿಯಕರ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಅನುಷಾ (20) ಮೃತ ಯುವತಿ. ಪ್ರಕರಣ ಸಂಬಂಧ ಆಕೆಯ ಪ್ರಿಯಕರ ಶರತ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಅನುಷಾ ಮತ್ತು ಶರತ್ ಇಬ್ಬರೂ ಒಂದೇ ಊರಿನವರಾಗಿದ್ದು, ಬೆಂಗಳೂರಿನ ಮಲ್ಲೇಶ್ವರಂ 7ನೇ ಕ್ರಾಸ್‌ನ ಬಾಡಿಗೆ ಮನೆಯಲ್ಲಿ ಲಿವಿಂಗ್-ಟು-ಗೆದರ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ಜೂನ್ 14ರಂದು ಅನುಷಾ ಊರಿಗೆ ಹೋಗಿ ಬರುವುದಾಗಿ ಶರತ್‌ಗೆ ತಿಳಿಸಿದ್ದಾಳೆ. ಆದರೆ ಇದಕ್ಕೆ ಆತ ವಿರೋಧ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಜಗಳ ತಾರಕಕ್ಕೇರಿದ ವೇಳೆ ಶರತ್ ತಾಳ್ಮೆ ಕಳೆದುಕೊಂಡು ಅನುಷಾಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಅನುಮಾನ ಬಾರದಂತೆ ಆಕೆಯ ಮೃತದೇಹವನ್ನು ಹಾಸಿಗೆಯ ಮೇಲೆ ಮಲಗಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪರಾರಿಯಾದ ಬಳಿಕ ಶರತ್ ವಕೀಲರೊಬ್ಬರಿಗೆ ಕರೆ ಮಾಡಿ ನಡೆದ ಘಟನೆಯನ್ನು ತಿಳಿಸಿದ್ದಾನೆ. ವಕೀಲರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಪೋಸ್ಟ್‌ಮಾರ್ಟಂ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿದ್ದು, ವಕೀಲರು ನೀಡಿದ ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.