ಪಿಯುಸಿ ಫಲಿತಾಂಶ: ರಿಪ್ಪನ್ ಪೇಟೆಯ ವಿದ್ಯಾರ್ಥಿನಿ ದಿಶಾಗೆ ರಾಜ್ಯ ಮಟ್ಟದಲ್ಲಿ 8ನೇ ರ್ಯಾಂಕ್
Disha, a commerce student from Rippon Pete, secures 8th rank in Karnataka PUC exams with 592/600 marks, bringing pride to Shivamogga district.
ರಿಪ್ಪನ್ ಪೇಟೆ : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ರಿಪ್ಪನ್ ಪೇಟೆಯ ವಿದ್ಯಾರ್ಥಿನಿ ದಿಶಾ ಅತ್ಯುತ್ತಮ ಸಾಧನೆ ಮಾಡಿದ್ದು, ರಾಜ್ಯ ಮಟ್ಟದಲ್ಲಿ 8ನೇ ರ್ಯಾಂಕ್ ಗಳಿಸುವ ಮೂಲಕ ಗಮನ ಸೆಳೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಓದಿದ್ದ ದಿಶಾ, ಒಟ್ಟು 600 ಅಂಕಗಳಲ್ಲಿ 592 ಅಂಕಗಳನ್ನು ಪಡೆದು ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.
ದಿಶಾ ಶಿವಮೊಗ್ಗದ ಪ್ರಸಿದ್ಧ ಪಿಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ವಿಷಯವಾರು ಅಂಕಗಳ ವಿವರ ನೋಡಿದರೆ, ಹಿಂದಿಯಲ್ಲಿ 100ರಲ್ಲಿ 100, ಇಂಗ್ಲಿಷ್ನಲ್ಲಿ 97, ಅರ್ಥಶಾಸ್ತ್ರದಲ್ಲಿ 96, ವ್ಯವಹಾರ ಅಧ್ಯಯನದಲ್ಲಿ 99, ಲೆಕ್ಕಶಾಸ್ತ್ರದಲ್ಲಿ 100 ಹಾಗೂ ಸಂಖ್ಯಾಶಾಸ್ತ್ರದಲ್ಲಿ 100 ಅಂಕಗಳನ್ನು ಗಳಿಸಿದ್ದಾಳೆ. ಈ ಸಾಧನೆ ವಿದ್ಯಾರ್ಥಿನಿಯ ಶ್ರಮ, ಏಕಾಗ್ರತೆ ಹಾಗೂ ಶೈಕ್ಷಣಿಕ ಶಿಸ್ತಿನ ಪ್ರತಿಬಿಂಬವಾಗಿದೆ.

ರಿಪ್ಪನ್ ಪೇಟೆಯ ಶ್ಯಾಮ್ ಜ್ಯುವೆಲ್ಲರ್ಸ್ ಮಾಲೀಕರಾದ ಸುರೇಶ್ ಮತ್ತು ಸುನೀತಾ ದಂಪತಿಗಳ ಪುತ್ರಿಯಾಗಿರುವ ದಿಶಾ, ತನ್ನ ಸಾಧನೆಯ ಮೂಲಕ ಕುಟುಂಬಕ್ಕೂ, ಪಟ್ಟಣಕ್ಕೂ ಹೆಮ್ಮೆ ತಂದಿದ್ದಾಳೆ. ಮೂಲತಃ ರಾಜಸ್ಥಾನದಿಂದ ಬದುಕು ಕಟ್ಟಿಕೊಳ್ಳಲು ರಿಪ್ಪನ್ ಪೇಟೆಗೆ ವಲಸೆ ಬಂದ ಈ ಕುಟುಂಬ, ಕಷ್ಟಪಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಆ ಪರಿಶ್ರಮಕ್ಕೆ ದಿಶಾದ ಈ ಸಾಧನೆ ಫಲವಾಗಿ ಪರಿಣಮಿಸಿದೆ.
ದಿಶಾ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ರಿಪ್ಪನ್ ಪೇಟೆಯ ರಾಮಕೃಷ್ಣ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾಳೆ. ವಿಶೇಷವೆಂದರೆ, ಮಾತೃಭಾಷೆ ರಾಜಸ್ಥಾನಿಯಾಗಿದ್ದರೂ, ದಿಶಾ ಕನ್ನಡ ಭಾಷೆಯ ಮೇಲಿನ ಹಿಡಿತವನ್ನು ಬಾಲ್ಯದಲ್ಲಿಯೇ ಬೆಳೆಸಿಕೊಂಡಿದ್ದಾಳೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಳು.
ಗ್ರಾಮೀಣ ಭಾಗದ ವಿದ್ಯಾರ್ಥಿನಿಯಾಗಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳಿಸಿರುವುದು ಇನ್ನಿತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಶಿಕ್ಷಣದ ಮೂಲಕ ಸಾಧನೆ ಸಾಧ್ಯವೆಂಬ ಸಂದೇಶವನ್ನು ನೀಡುತ್ತದೆ. ದಿಶಾಳ ಯಶಸ್ಸಿನ ಹಿಂದೆ ಪಾಲಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಹಾಗೂ ಅವಳ ನಿರಂತರ ಪರಿಶ್ರಮ ಪ್ರಮುಖ ಪಾತ್ರ ವಹಿಸಿದೆ.
ಈ ಸಾಧನೆಯೊಂದಿಗೆ ದಿಶಾ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಗುರಿಗಳನ್ನು ಹೊಂದಿದ್ದು, ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ ದೇಶಕ್ಕೆ ಕೊಡುಗೆ ನೀಡುವ ಕನಸನ್ನು ಹೊಂದಿದ್ದಾಳೆ. ಸ್ಥಳೀಯರು ಹಾಗೂ ಶಿಕ್ಷಣ ಕ್ಷೇತ್ರದವರು ದಿಶಾಳಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.
ಗ್ರಾಮೀಣ ಪ್ರತಿಭೆ ದಿಶಾಳ ಅದ್ವಿತೀಯ ಸಾಧನೆಗೆ ಪೋಸ್ಟ್ ಮ್ಯಾನ್ ನ್ಯೂಸ್ ಬಳಗದಿಂದ ಅಭಿನಂದನೆಗಳು..