POSTMANNEWS

ನೈಜ ಸುದ್ದಿ ನೇರ ಬಿತ್ತರ..

ಈ ಬಾರಿಯ ಗಣರಾಜ್ಯೋತ್ಸವ 77ನೇ ಅಥವಾ 78ನೇ ಆಚರಣೆ! ಗೊಂದಲ ಬೇಡ – ಸಂಪೂರ್ಣ ವಿವರ ಇಲ್ಲಿದೆ

2026ರ ಗಣರಾಜ್ಯೋತ್ಸವ 77ನೇಯಾ ಅಥವಾ 78ನೇಯಾ ಎಂಬ ಗೊಂದಲವಿದೆಯಾ? ಭಾರತ 1950ರಿಂದ ಗಣರಾಜ್ಯೋತ್ಸವವನ್ನು ಹೇಗೆ ಎಣಿಸುತ್ತದೆ ಎಂಬ ಸಂಪೂರ್ಣ ವಿವರಗಳನ್ನು ಇಲ್ಲಿ ಓದಿ.

ನವದೆಹಲಿ: ಪ್ರತಿ ವರ್ಷ ಜನವರಿ 26ರಂದು ಭಾರತದಲ್ಲಿ ಅದ್ಧೂರಿಯಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಆದರೆ ಈ ಬಾರಿ 77ನೇಯಾ? 78ನೇಯಾ? ಎಂಬ ಗೊಂದಲ ಹಲವರಲ್ಲಿ ಕಂಡುಬಂದಿದೆ. ಇದರ ಸ್ಪಷ್ಟ ಉತ್ತರವೇನೆಂದರೆ – ಈ ಬಾರಿ ಭಾರತ 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ.

1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಪಡೆದ ಭಾರತ, 1950ರ ಜನವರಿ 26ರಂದು ಸಂವಿಧಾನ ಜಾರಿಗೊಳಿಸುವ ಮೂಲಕ ಸಾರ್ವಭೌಮ, ಪ್ರಜಾಸತ್ತಾತ್ಮಕ ಮತ್ತು ಗಣರಾಜ್ಯ ರಾಷ್ಟ್ರವಾಗಿ ಘೋಷಿತವಾಯಿತು. ಆ ದಿನದಿಂದ ಪ್ರತಿವರ್ಷ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದ್ದು, 2026ರಲ್ಲಿ 77ನೇ ಗಣರಾಜ್ಯೋತ್ಸವಕ್ಕೆ ದೇಶ ಸಜ್ಜಾಗಿದೆ.

ಜನವರಿ 26ರ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ 77ನೇ ಗಣರಾಜ್ಯೋತ್ಸವ ಪಥಸಂಚಲನವನ್ನು ಮುನ್ನಡೆಸಲಿದ್ದಾರೆ. ಪಥಸಂಚಲನ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದ್ದು, 10.30ರಿಂದ ಲೈವ್‌ ಪ್ರಸಾರವಾಗಲಿದೆ. ಸಾರ್ವಜನಿಕರಿಗೆ ಬೆಳಿಗ್ಗೆ 7 ಗಂಟೆಯಿಂದ ಪ್ರವೇಶಾವಕಾಶ ನೀಡಲಾಗಿದೆ.

ಈ ವರ್ಷದ ಪರೇಡ್‌ನಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸೇನಾ ಶಕ್ತಿ ಹಾಗೂ ತಾಂತ್ರಿಕ ಪ್ರಗತಿಯನ್ನು ಅನಾವರಣಗೊಳಿಸಲಾಗುತ್ತದೆ. ರಾಷ್ಟ್ರಗೀತೆ ‘ವಂದೇ ಮಾತರಂ’ 150 ವರ್ಷ ಪೂರೈಸಿದ ಐತಿಹಾಸಿಕ ಕ್ಷಣಕ್ಕೂ ಈ ಗಣರಾಜ್ಯೋತ್ಸವ ಸಾಕ್ಷಿಯಾಗಲಿದೆ.

ಕಾರ್ಯಕ್ರಮದ ಅಂತ್ಯದಲ್ಲಿ ಭಾರತೀಯ ವಾಯುಪಡೆಯ 29 ವಿಮಾನಗಳ ವಾಯು ಪ್ರದರ್ಶನ ನಡೆಯಲಿದೆ. ಈ ಬಾರಿ ವಾಯುಪಡೆ ‘ಸಿಂಧೂರ್’ ರಚನೆಯನ್ನು ಪ್ರದರ್ಶಿಸಲಿದ್ದು, ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ಶಕ್ತಿಪ್ರದರ್ಶನ ನೀಡಲಿವೆ. ಈ ರಚನೆಯಲ್ಲಿ ಎರಡು ರಫೇಲ್‌, ಎರಡು Su-30, ಎರಡು MiG-29 ಹಾಗೂ ಒಂದು ಜಾಗ್ವಾರ್ ಯುದ್ಧ ವಿಮಾನಗಳು ಭಾಗವಹಿಸಲಿವೆ.

ಕರ್ತವ್ಯ ಪಥದಲ್ಲಿ ಒಟ್ಟು 30 ಸ್ತಬ್ಧಚಿತ್ರಗಳು ಸಾಗಲಿದ್ದು, ‘ಸ್ವಾತಂತ್ರ್ಯದ ಮಂತ್ರ: ವಂದೇ ಮಾತರಂ’ ಮತ್ತು ‘ಸಮೃದ್ಧಿಯ ಮಂತ್ರ: ಆತ್ಮನಿರ್ಭರ ಭಾರತ’ ಈ ಬಾರಿಯ ಮುಖ್ಯ ಥೀಮ್‌ಗಳಾಗಿವೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 17 ಸ್ತಬ್ಧಚಿತ್ರಗಳು ಮತ್ತು ಕೇಂದ್ರ ಸಚಿವಾಲಯಗಳಿಂದ 13 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ. ಭಾರತೀಯ ವಾಯುಪಡೆಯ ಮಾಜಿ ಸೈನಿಕರನ್ನು ಒಳಗೊಂಡ ವಿಶೇಷ ಸ್ತಬ್ಧಚಿತ್ರವೂ ಗಮನ ಸೆಳೆಯಲಿದೆ.

ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳು ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮವು ಸಾಂಪ್ರದಾಯಿಕ ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ಸ್ವದೇಶಿ 105 ಎಂಎಂ ಲೈಟ್ ಫೀಲ್ಡ್ ಗನ್‌ಗಳಿಂದ 21 ಬಾರಿಯ ಗೌರವ ವಂದನೆಯೊಂದಿಗೆ ಆರಂಭವಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊದಲಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ವೀರರಿಗೆ ಗೌರವ ಸಲ್ಲಿಸಿ, ನಂತರ ಕರ್ತವ್ಯ ಪಥದ ವಂದನಾ ವೇದಿಕೆಯಿಂದ ಪಥಸಂಚಲನ ವೀಕ್ಷಿಸಲಿದ್ದಾರೆ.

ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ಸುಮಾರು 10,000 ವಿಶೇಷ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ಯಾರಾ ಕ್ರೀಡಾ ವಿಜೇತರು, ನೈಸರ್ಗಿಕ ಕೃಷಿಕರು, ಇಸ್ರೋ ವಿಜ್ಞಾನಿಗಳು, ತಾಂತ್ರಿಕ ತಜ್ಞರು ಹಾಗೂ ಹೈಡ್ರೋಜನ್ ಉತ್ಪಾದನೆಗೆ ಕೊಡುಗೆ ನೀಡಿದ ಕಂಪನಿಗಳ ಮುಖ್ಯಸ್ಥರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ.

ಬಿಗಿ ಭದ್ರತೆಯಲ್ಲಿ ದೆಹಲಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕರ್ತವ್ಯ ಪಥ ಮತ್ತು ರೈಸಿನಾ ಹಿಲ್ ಸುತ್ತಮುತ್ತ ವ್ಯಾಪಕ ಪೊಲೀಸ್‌ ನಿಯೋಜನೆ ಮಾಡಲಾಗಿದ್ದು, ಮೆರವಣಿಗೆ ಮಾರ್ಗದುದ್ದಕ್ಕೂ 1,000ಕ್ಕೂ ಹೆಚ್ಚು ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

About The Author