POSTMANNEWS

ನೈಜ ಸುದ್ದಿ ನೇರ ಬಿತ್ತರ..

ಝಕಿಯಾ ಕೊಲೆ ಪ್ರಕರಣದಲ್ಲಿ ಶಾಕಿಂಗ್ ಟ್ವಿಸ್ಟ್: ಮದುವೆಯಾಗಬೇಕಿದ್ದವನೇ ಹಂತಕ!

Dharwad rural police solved the Zakia Mulla murder case. A shocking twist reveals the man she was supposed to marry strangled her following a dispute over marriage talks.

ಧಾರವಾಡ (ಜ.22): ನಗರದ ಹೊರವಲಯದ ಮನಸೂರು ರಸ್ತೆಯಲ್ಲಿರುವ ಡೈರಿಯೊಂದರ ಬಳಿ ಪತ್ತೆಯಾಗಿದ್ದ 21 ವರ್ಷದ ಯುವತಿ ಝಕಿಯಾ ಮುಲ್ಲಾ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಪೊಲೀಸರು ಮಹತ್ವದ ಸುಳಿವು ಪತ್ತೆಹಚ್ಚಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿಯನ್ನು ಮದುವೆಯಾಗಬೇಕಿದ್ದ ಸಾಬೀರ್ ಮುಲ್ಲಾ ಎಂಬಾತನೇ ವೇಲ್‌ನಿಂದ ಕತ್ತು ಹಿಸುಕಿ ಝಕಿಯಾಗೆ ಕೊಲೆ ಮಾಡಿದ್ದಾನೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗಾಂಧಿ ಚೌಕ ನಿವಾಸಿಯಾಗಿದ್ದ ಝಕಿಯಾ ಮುಲ್ಲಾ ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದರು. ಜನವರಿ 20ರ ಸಂಜೆ ಲ್ಯಾಬ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅವರು ರಾತ್ರಿ ಮನೆಗೆ ಮರಳಿರಲಿಲ್ಲ. ಆದರೆ, ಮರುದಿನ ಬೆಳಿಗ್ಗೆ ಶಾಸಕ ವಿನಯ್ ಕುಲಕರ್ಣಿ ಡೈರಿ ಬಳಿ ಯುವತಿಯ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಬೇರೆ ಸ್ಥಳದಲ್ಲಿ ಹತ್ಯೆ ನಡೆಸಿ ಇಲ್ಲಿ ಶವ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

ತನಿಖೆಯ ವೇಳೆ ಆಘಾತಕಾರಿ ಸಂಗತಿ ಹೊರಬಿದ್ದಿದ್ದು, ಹತ್ಯೆ ನಡೆದ ಸ್ಥಳದಲ್ಲಿದ್ದ ಆರೋಪಿ ಸಾಬೀರ್ ಮುಲ್ಲಾನೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದನು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗಲೂ ಅಲ್ಲೇ ಇದ್ದು, ಏನೂ ಗೊತ್ತಿಲ್ಲದವನಂತೆ ವರ್ತಿಸಿದ್ದನು. ಆದರೆ ಆತನ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಝಕಿಯಾ ಮತ್ತು ಸಾಬೀರ್ ಸಂಬಂಧಿಕರಾಗಿದ್ದು, ಕುಟುಂಬಸ್ಥರು ಇವರ ಮದುವೆ ಕುರಿತು ಮಾತುಕತೆ ನಡೆಸಿದ್ದರು. ಜನವರಿ 20ರ ಸಂಜೆ ಇಬ್ಬರೂ ಹೊರಗೆ ಸುತ್ತಾಡಲು ತೆರಳಿದ್ದು, ಈ ವೇಳೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ನಡೆದಿದೆ. ಜಗಳ ಉಗ್ರ ರೂಪ ತಾಳುತ್ತಿದ್ದಂತೆ ಆಕ್ರೋಶಗೊಂಡ ಸಾಬೀರ್, ಝಕಿಯಾ ಧರಿಸಿದ್ದ ವೇಲ್‌ನಿಂದಲೇ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಆರೋಪಿ ಸಾಬೀರ್ ಮುಲ್ಲಾನನ್ನು ಬಂಧಿಸಿರುವ ಪೊಲೀಸರು, ಈ ಕೃತ್ಯದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಶಂಕೆಯಲ್ಲಿ ಮತ್ತೊಬ್ಬ ಯುವಕನನ್ನು ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವಿದ್ಯಾಕಾಶಿಯಲ್ಲಿ ನಡೆದ ಈ ಭೀಕರ ಹತ್ಯೆ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದು, ಮದುವೆಯಾಗಬೇಕಿದ್ದವನೇ ಯುವತಿಯ ಪ್ರಾಣ ತೆಗೆದಿರುವುದು ದುರಂತ ಹಾಗೂ ಆಘಾತಕಾರಿ ಘಟನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author