ಬೀದಿನಾಯಿಗಳ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಬಾಲಕಿ – ವೀಡಿಯೋ ವೈರಲ್
ಪುಟ್ಟ ಬಾಲಕಿಯೊಬ್ಬಳು ಬೀದಿ ನಾಯಿಗಳ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಬಾಲಕಿಯೊಬ್ಬಳು ಮನೆಯ ಬಾಗಿಲು ತೆರೆದುಕೊಂಡು ಹೊರಕ್ಕೆ ಬರುತ್ತಾಳೆ. ರಸ್ತೆಯ ಇನ್ನೊಂದು ಬದಿಗೆ ಹೋಗಬೇಕಿದ್ದ ಬಾಲಕಿ ಗುಡುಗುಡು ಅಂತಾ ಓಡಿ ಬರುತ್ತಾಳೆ. ಇತ್ತ ಇನ್ನೊಂದು ಬದಿಯಲ್ಲಿ ನಾಲ್ಕು ಬೀದಿ ನಾಯಿಗಳು ನಿಂತಿರುತ್ತವೆ. ಇವುಗಳ ಪೈಕಿ ಒಂದು ನಾಯಿ ಬಾಲಕಿ ಓಡಿಬರುವುದನ್ನ ಗಮನಿಸಿ ನೇರವಾಗಿ ದಾಳಿ ಇಡುತ್ತದೆ. ಬಾಲಕಿ ಬೆಚ್ಚಿಬೀಳುತ್ತಾ ಮೆಟ್ಟಿಲು ಹತ್ತಿ ಓಡುತ್ತಾಳೆ. ಅದೃಷ್ಟಕ್ಕೆ ನಾಯಿ ಬಾಲಕಿಗೆ ಕಚ್ಚಿಲ್ಲ. ಬೆಚ್ಚಿದ ಬಾಲಕಿಗೆ ಹೆದರಿದ ನಾಯಿ ಅಲ್ಲಿಂದ ಓಡಿಹೋಗಿದೆ.
ಈ ವೀಡಿಯೋದ ಹಿನ್ನಲೆಯ ಧ್ವನಿಯಲ್ಲಿ ಸೊರಬದಲ್ಲಿ ನಡೆದಿರುವ ಘಟನೆ ಎಂದು ಹೇಳಲಾಗುತಿದೆ.ಒಟ್ಟಾರೆಯಾಗಿ ಬೀದಿನಾಯಿಗಳ ದಾಳಿಯಿಂದ ಪುಟಾಣಿ ಮಗುವೊಂದು ಪಾರಾಗಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.